ಬೆಂಗಳೂರು:- ರಾಜಧಾನಿಯ ಕೆ.ಆರ್. ಪುರಂನಲ್ಲಿ ವೃದ್ಧೆಯೊಬ್ಬರನ್ನು ತುಂಡು ತುಂಡಾಗಿ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ.
ಸುಶೀಲಮ್ಮ ಕೊಲೆಯಾದ ವೃದ್ಧೆ (70) ಎನ್ನಲಾಗಿದೆ. ಕೆ.ಆರ್. ಪುರಂ ಠಾಣೆ ವ್ಯಾಪ್ತಿಯ ನಿಸರ್ಗ ಲೇಔಟ್ನಲ್ಲಿ ಘಟನೆ ನಡೆದಿದ್ದು, ವೃದ್ಧೆಯ ದೇಹವನ್ನು ತುಂಡಾಗಿ ಕತ್ತರಿಸಿದ ಡ್ರಮ್ನಲ್ಲಿ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮೃತದೇಹದ ದುರ್ವಾಸನೆಯಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಕೆ.ಆರ್. ಪುರಂ ಪೊಲೀಸರು ಮತ್ತು ಎಫ್ಎಸ್ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಕೊಲೆಯಾದ ಮನೆಯಲ್ಲಿ ಮಗಳೊಂದಿಗೆ ವೃದ್ಧೆ ವಾಸವಿದ್ದರು. ಆಸ್ತಿ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ವೃದ್ಧೆಯ ದೇಹವನ್ನ ಆರು ಭಾಗವಾಗಿ ಪೀಸ್ ಪೀಸ್ ಮಾಡಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ಸ್ಥಳದ ಕೂದಲೆಳೆ ದೂರದಲ್ಲೇ ವಾಸವಿರೋ ವ್ಯಕ್ತಿಯನ್ನ ವಶಕ್ಕೆ ಪಡೆಯಲಾಗಿದೆ. ರಕ್ತದ ಕಲೆ ಆಧರಿಸಿ ಸ್ಥಳೀಯ ಮನೆಯೊಂದಕ್ಕೆ ಡಾಗ್ ಸ್ಕ್ವಾಡ್ ಶ್ವಾನ ಪೊಲೀಸರನ್ನ ಕರೆದೊಯ್ದಿತ್ತು. ವಶಕ್ಕೆ ಪಡೆದಿರುವ ವ್ಯಕ್ತಿ ಮೃತ ಸುಶೀಲಮ್ಮ ಕುಟುಂಬಕ್ಕೆ ಚಿರಪರಿಚಿತ ಹಾಗೂ ಅತ್ಯಾಪ್ತ ಎಂದು ತಿಳಿದುಬಂದಿದೆ. ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕೊಲೆಯಾದ ವೃದ್ಧೆ ಸುಶೀಲಮ್ಮ ಹೆಸರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇದೆ. ಉತ್ತರಹಳ್ಳಿ ಹಾಗೂ ಯಲಹಂಕದಲ್ಲಿ ವೃದ್ಧೆ ಸುಶೀಲಮ್ಮ ಹೆಸರಲ್ಲಿ ಪ್ರಾಪರ್ಟಿ ಇದೆ. ಕೆಲ ಆಸ್ತಿಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೋರ್ಟ್ನಲ್ಲಿ ವ್ಯಾಜ್ಯ ಇತ್ಯರ್ಥವಾಗಿತ್ತು. ಸದ್ಯದಲ್ಲೇ ದೊಡ್ಡದಾದ ಅಮೌಂಟ್ ಬರಲಿದೆ ಎಂದು ಸ್ಥಳೀಯರು ಹಾಗೂ ಪರಿಚಿತರ ಬಳಿ ಸುಶೀಲಮ್ಮ ಹೇಳಿಕೊಂಡಿದ್ದರು. ಕೋಟಿಗಟ್ಟಲೇ ಆಸ್ತಿಯಿದ್ದರೂ ಮಕ್ಕಳಿಂದ ದೂರವಿದ್ದರು. ನಿಸರ್ಗ ಬಡಾವಣೆಯಲ್ಲೇ ಮೃತ ಸುಶೀಲಮ್ಮರ ಮಗ ಹಾಗೂ ಮಗಳು ಪ್ರತ್ಯೇಕವಾಗಿ ವಾಸವಿದ್ದರು ಎನ್ನಲಾಗಿದೆ.