ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಏಪ್ರಿಲ್ 3 ರಿಂದ ಚುನಾವಣಾ ಬಾಂಡ್ಗಳ (Electoral Bonds) ಮಾರಾಟ ಮಾಡಲು ಆರಂಭಿಸಿದೆ. ಏಪ್ರಿಲ್ 12ರ ವರೆಗೆ ಎಸ್ಬಿಐನ 29 ಶಾಖೆಗಳಲ್ಲಿ ಚುನಾವಣಾ ಬಾಂಡ್ಗಳು ಖರೀದಿಗೆ ಲಭ್ಯ ಇರಲಿವೆ. ಕೇಂದ್ರ ಹಣಕಾಸು ಸಚಿವಾಲಯವು ಮಾರ್ಚ್ 31ರಂದು ‘ಎಲೆಕ್ಟೋರಲ್ ಬಾಂಡ್ ಸ್ಕೀಮ್ 2018’ ರ ಅಡಿಯಲ್ಲಿ ಚುನಾವಣಾ ಬಾಂಡ್ಗಳ 26ನೇ ಕಂತಿನ ಘೋಷಣೆ ಮಾಡಿತ್ತು. ಇದರಂತೆ, ಭಾರತೀಯ ನಾಗರಿಕರು, ಉದ್ಯಮಿಗಳು ಬಾಂಡ್ಗಳನ್ನು ಖರೀದಿಸಬಹುದಾಗಿದ್ದು, ರಾಜಕೀಯ ಪಕ್ಷಗಳು ತೆರೆದಿರುವ ಎಲೆಕ್ಟೋರಲ್ ಬಾಂಡ್ ಖಾತೆಗಳ ಮೂಲಕ ದೇಣಿಗೆ ನೀಡಬಹುದಾಗಿದೆ. ಬಾಂಡ್ಗಳು ಇಶ್ಯೂ ಮಾಡಿದ 15 ದಿನಗಳ ಅವಧಿಗೆ ಮಾನ್ಯತೆ ಹೊಂದಿರುತ್ತವೆ. ಈ ಅವಧಿಯ ಒಳಗಾಗಿ ರಾಜಕೀಯ ಪಕ್ಷಗಳು ಅವುಗಳನ್ನು ಪಡೆಯಬೇಕಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆ ಮೇ 10ರಂದು ನಡೆಯಲಿದ್ದು, ಫಲಿತಾಂಶ ಮೇ 13ರಂದು ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾರ್ಚ್ 29ರಂದು ಘೋಷಿಸಿತ್ತು.
ಈ ಹಿಂದಿನ ಮಾರಾಟದ ಅವಧಿಯಲ್ಲಿ, ಜನವರಿ ತಿಂಗಳಲ್ಲಿ ಎಸ್ಬಿಐ 308.76 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ಗಳ ಗುಚ್ಛವನ್ನು ಮಾರಾಟ ಮಾಡಿತ್ತು. ಫೆಬ್ರುವರಿಯಲ್ಲಿ ನಡೆದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಾಂಡ್ಗಳನ್ನು ಬಿಡುಗಡೆ ಮಾಡಲಾಗಿತ್ತು ಎಂಬುದು ಆರ್ಟಿಐ ಅರ್ಜಿಯಡಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
2018ರ ನಂತರ ಈ ವರೆಗೆ ಎಸ್ಬಿಐ 12,008.59 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ಗಳನ್ನು ಮಾರಾಟ ಮಾಡಿದೆ. ಈ ಪೈಕಿ 11,984.91 ಕೋಟಿ ರೂ. ಮೌಲ್ಯದ ಬಾಂಡ್ಗಳನ್ನು ರಾಜಕೀಯ ಪಕ್ಷಗಳು ರಿಡೀಮ್ ಮಾಡಿಕೊಂಡಿವೆ.
ಪ್ರತಿ ವರ್ಷ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಾಲ್ಕರಿಂದ 10 ದಿನಗಳ ಅವಧಿಗೆ ಚುನಾವಣಾ ಬಾಂಡ್ಗಳನ್ನು ಮಾರಾಟ ಮಾಡಲಾಗುತ್ತದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೆಚ್ಚುವರಿಯಾಗಿ 30 ದಿನಗಳ ಕಾಲ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಹೆಚ್ಚುವರಿಯಾಗಿ 15 ದಿನಗಳ ಕಾಲ ಬಾಂಡ್ಗಳ ಮಾರಾಟಕ್ಕೆ 2022ರಿಂದ ಹಣಕಾಸು ಸಚಿವಾಲಯ ಅನುಮತಿ ನೀಡಿದೆ.
ಚುನಾವಣಾ ಬಾಂಡ್ ಎಂದರೇನು?
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕಾಗಿ ವ್ಯಕ್ತಿಗಳು ಅಥವಾ ಸಂಸ್ಥೆ / ಕಂಪನಿಗಳು ಈ ಚುನಾವಣಾ ಬಾಂಡ್ಗಳನ್ನು ಉಪಯೋಗಿಸುತ್ತವೆ. ಎಸ್ಬಿಐ ಬ್ಯಾಂಕ್ ನಿರ್ದಿಷ್ಟ ಮುಖಬೆಲೆಯ ಚುನಾವಣಾ ಬಾಂಡ್ಗಳನ್ನು ಬಿಡುಗಡೆ ಮಾಡಿ ಮಾರಾಟ ಮಾಡುತ್ತದೆ. ಚುನಾವಣಾ ಬಾಂಡ್ಗಳನ್ನು ಅರ್ಹ ರಾಜಕೀಯ ಪಕ್ಷವು ಅಧಿಕೃತ ಬ್ಯಾಂಕ್ ಖಾತೆಯ ಮೂಲಕ ಮಾತ್ರವೇ ಎನ್ಕ್ಯಾಶ್ ಮಾಡಬಹುದಾಗಿದೆ.
ಚುನಾವಣಾ ಬಾಂಡ್ ಅನ್ನು ಯಾರು, ಹೇಗೆ ಖರೀದಿಸಬಹುದು?
ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಲು ಬಯಸುವ ವ್ಯಕ್ತಿ ಅಥವಾ ಸಂಸ್ಥೆ / ಕಂಪನಿಗಳು ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದು. ಎಸ್ಬಿಐ ಬ್ಯಾಂಕ್ನ ಅಧಿಕೃತ ಶಾಖೆಗಳಲ್ಲಿ ಚುನಾವಣಾ ಬಾಂಡ್ಗಳು ದೊರೆಯುತ್ತವೆ. ಡಿಜಿಟಲ್ ಪಾವತಿ ಅಥವಾ ಚೆಕ್ ನೀಡಿ ಚುನಾವಣಾ ಬಾಂಡ್ಗಳನ್ನು ಖರೀದಿಸಬೇಕು. ನಗದು ನೀಡಿ ಖರೀದಿಸಲು ಅವಕಾಶವಿಲ್ಲ. ಚುನಾವಣಾ ಬಾಂಡ್ಗಳನ್ನು ಖರೀದಿಸಿದ ದೇಣಿಗೆದಾರು ಅದನ್ನು ತನ್ನಿಚ್ಛೆಯ ರಾಜಕೀಯ ಪಕ್ಷಕ್ಕೆ ನೀಡಬಹುದು. ಅದನ್ನು ರಾಜಕೀಯ ಪಕ್ಷ 15 ದಿನಗಳ ಒಳಗಾಗಿ ಎನ್ಕ್ಯಾಶ್ ಮಾಡಿಕೊಳ್ಳಬೇಕು.
ಯಾವೆಲ್ಲ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಸ್ವೀಕರಿಸಬಹುದು?
ಭಾರತದ ನಾಗರಿಕರು ಹಾಗೂ ಸಂಸ್ಥೆಗಳು ಚುನಾವಣಾ ಬಾಂಡ್ಗಳ ಖರೀದಿಗೆ ಅರ್ಹರಾಗಿರುತ್ತಾರೆ. ಜಂಟಿಯಾಗಿಯೂ ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದಾಗಿದೆ. ಕೆವೈಸಿ ದೃಢೀಕರಿಸಿದ ಬಳಿಕವಷ್ಟೇ ಚುನಾವಣಾ ಬಾಂಡ್ಗಳನ್ನು ವಿತರಿಸಲಾಗುತ್ತದೆ. ಈ ಬಾಂಡ್ಗಳು ಇದು ಪಾವತಿ ಮಾಡುವವರ ಹೆಸರನ್ನು ಹೊಂದಿರುವುದಿಲ್ಲ
1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 29ಎ ಅಡಿಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷ ಮಾತ್ರ ಚುನಾವಣಾ ಬಾಂಡ್ಗಳನ್ನು ಸ್ವೀಕರಿಸಲು ಅವಕಾಶವಿದೆ. ಅಲ್ಲದೆ, ಹಿಂದಿನ ಲೋಕಸಭೆ ಚುನಾವಣೆ ಹಾಗೂ ರಾಜ್ಯ ಚುನಾವಣೆಗಳಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರೆ ಅಂಥ ರಾಜಕೀಯ ಪಕ್ಷ ಚುನಾವಣಾ ಬಾಂಡ್ ಸ್ವೀಕರಿಸಲು ಅರ್ವಾಗಿರುವುದಿಲ್ಲ.
ಚುನಾವಣಾ ಬಾಂಡ್ ಬಿಡುಗಡೆಗೆ ಕಾರಣವೇನು?
ರಾಜಕೀಯ ಪಕ್ಷಗಳಿಗೆ ಹಣಕಾಸು ನೆರವು ನೀಡುವ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ 2017ರ ಹಣಕಾಸು ಕಾಯ್ದೆಯಲ್ಲಿ ಚುನಾವಣಾ ಬಾಂಡ್ ಪರಿಚಯಿಸಿತು. 2018ರಲ್ಲಿ ಚುನಾವಣಾ ಬಾಂಡ್ ಯೋಜನೆ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. 2017ರ ಬಜೆಟ್ನಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಚುನಾವಣಾ ಬಾಂಡ್ಗಳನ್ನು ಬಿಡುಗಡೆ ಮಾಡುವ ಯೋಜನೆ ಬಗ್ಗೆ ಘೋಷಿಸಿದ್ದರು.