ಬೆಂಗಳೂರು: ಕರ್ನಾಟಕ ಚುನಾವಣಾ ಅಖಾಡ ರಂಗೇರುತ್ತಿದೆ. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ನಿರಂತರ ರಾಜ್ಯ ಪ್ರವಾಸದ ಬೆನ್ನಲ್ಲೇ, ಇದೀಗ ಕಾಂಗ್ರೆಸ್ ಕೂಡಾ ರಾಷ್ಟ್ರೀಯ ನಾಯಕರನ್ನು ರಾಜ್ಯ ಚುನಾವಣಾ ಪ್ರಚಾರಕ್ಕೆ ಕರೆತರಲು ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದೆ. ರಾಜ್ಯದ ನಾಲ್ಕು ಕಡೆಗಳಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧಾರ ಮಾಡಿದೆ.
ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಛತ್ತೀಸ್ಗಡ ಸಿಎಂ ಭೂಪೇಶ್ ಬಘೇಲ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖ್ಬು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಟಾರ್ ಕ್ಯಾಂಪೇನರ್ಗಳಾಗಿ ಕರ್ನಾಟಕದಲ್ಲಿ ಪ್ರಚಾರ ನಡೆಸಲಿದ್ದಾರೆ.
ಸೋನಿಯಾ ಗಾಂಧಿ ಪ್ರಚಾರ ಡೌಟ್
ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗುವುದು ಅನುಮಾನ. ಆರೋಗ್ಯ ಕಾರಣದಿಂದ ಅವರು ಪ್ರಚಾರ ಕಾರ್ಯದಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ರಾಜ್ಯದ ನಾಲ್ಕು ಕಡೆಗಳಲ್ಲಿ ಬೃಹತ್ ಸಮಾವೇಶ
ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ಸಿದ್ಧತೆ ಕೈಗೊಂಡಿದೆ. ಆದರೆ ಯಾವ ಸ್ಥಳದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳುವ ಕುರಿತಾಗಿ ಇನ್ನೂ ನಿಗದಿಯಾಗಿಲ್ಲ.
ಏಪ್ರಿಲ್ 9 ರಂದು ಕೋಲಾರಕ್ಕೆ ರಾಹುಲ್ ಗಾಂಧಿ ಆಗಮನ
ಈಗಾಗಲೇ ಕೋಲಾರದಲ್ಲಿ ರಾಹುಲ್ ಗಾಂಧಿ ಸಮಾವೇಶ ನಿಗದಿಯಾಗಿದ್ದು, ಏಪ್ರಿಲ್ 9 ರಂದು ರಾಹುಲ್ ಗಾಂಧಿ ಕೋಲಾರಕ್ಕೆ ಆಗಮಿಸಲಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ
ಇನ್ನು ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ನಾ ನಾರಿ ಸಮಾವೇಶವನ್ನು ಭಾಗಿಯಾಗಿದ್ದರು. ಇದೀಗ ಮಹಿಳೆಯರನ್ನು ಸೆಳೆಯುವ ನಿಟ್ಟಿನಲ್ಲೂ ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಪ್ರಚಾರ ಸಮಾವೇಶದಲ್ಲಿ ಭಾಗಿ ಆಗಲಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ವಾರ್ ರೂಂಗೆ ಸಮಾವೇಶ ರೂಪುರೇಷೆ ಹೊಣೆ
ಮಾಜಿ ಐಎಎಸ್ ಅಧಿಕಾರಿ ಸಶಿಕಾಂತ್ ಸೆಂಥಿಲ್ ನೇತೃತ್ವದ ಕಾಂಗ್ರೆಸ್ ಪಕ್ಷದ ವಾರ್ ರೂಂಗೆ ನಾಲ್ಕು ಕಡೆಗಳ ಬೃಹತ್ ಸಮಾವೇಶದ ರೂಪುರೇಷೆಗಳನ್ನ ತಯಾರಿ ಮಾಡುವ ಹೊಣೆ ನೀಡಲಾಗಿದೆ. ಪಕ್ಷದ ಸಮಾವೇಶದ ಸ್ವರೂಪ, ಸ್ಥಳವನ್ನು ವಾರ್ ರೂಂ ನಿರ್ಧಾರ ಮಾಡಲಿದೆ. ಈ ಮೂಲಕ ಶೀಘ್ರದಲ್ಲಿ ದೊಡ್ಡ ಮಟ್ಟದ ಪ್ರಚಾರ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಳ್ಳಲಿದೆ.