ಕಲಬುರಗಿ: ಕಲಬುರಗಿಗೆ ಇಂದು ಚುನಾವಣೆ ಚಾಣಕ್ಯ ಅಮಿತ್ ಶಾ (Amit Shah) ಎಂಟ್ರಿ ನೀಡುತ್ತಿದ್ದು ಜೇವರ್ಗಿ ಮತ್ತು ಅಫಜಲಪುರದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಸಂಜೆ ನಾಲ್ಕ ಗಂಟೆಗೆ ಜೇವರ್ಗಿಯಲ್ಲಿ ಸಾರ್ವಜನಿಕ ಸಭೆ ನಡೆಸಿ ಸಂಜೆ 5.30 ಕ್ಕೆ ಅಫಜಲಪುರದಲ್ಲಿ ಸಭೆ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ಬಳಿಕ ರಾತ್ರಿ ಕಲಬುರಗಿ ನಗರದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಇಂದು ಕನಕಪುರ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಕೇಂದ್ರ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರ ಮುಂದೂಡಿಕೆಯಾಗಿದೆ. ಮೇ 8ರಂದು ಕನಕಪುರದಲ್ಲಿ ಅಮಿತ್ ಶಾ ಪ್ರಚಾರ ಸಾಧ್ಯತೆ ಇದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇವಲ 6 ದಿನಗಳು ಮಾತ್ರ ಬಾಕಿ ಇವೆ. ಮೇ 10ರಂದು ಮತದಾನ ನಡೆಯಲಿದ್ದು ಮೇ 13ಕ್ಕೆ ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಕಾಂಗ್ರೆಸ್–ಬಿಜೆಪಿ ಕೇಂದ್ರ ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್ಡಿ ಕುಮಾರಸ್ವಾಮಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪ್ರಚಾರ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಂತೆ ರಾಜ್ಯದಲ್ಲಿ ಕೋಲಾಹಲ ಎದ್ದಿತ್ತು. ಬಜರಂಗದಳ ನಿಷೇಧದ ಬೆಂಕಿ ಹಬ್ಬಿತ್ತು. ಹೀಗಾಗಿ ಸಂಜೆ 7 ಗಂಟೆಗೆ ಹನುಮಾನ್ ಚಾಲೀಸಾ ಪಠಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ 2 ದಿನಗಳಿಂದ ಪ್ರಚಾರ ನಡೆಸಿ ಇಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಕಲಬುರಗಿಯಲ್ಲಿ ಚುನಾವಣೆ ಚಾಣಕ್ಯ ಅಮಿತ್ ಶಾ ಅಬ್ಬರಿಸಲಿದ್ದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ.