ಬೆಂಗಳೂರು: ನಾಳೆ ವಿಧಾನಸಭಾ ಚುನಾವಣೆಗೆ(Karnataka Assembly Election) ವೋಟ್ ಮಾಡಲು ಸಜ್ಜಾಗಿರುವ ಸಿಲಿಕಾನ್ ಸಿಟಿ ಜನರು ಒಂದು ದಿನ ಮುಂಚೆಯೇ ಬೆಂಗಳೂರು ಬಿಟ್ಟು ತಮ್ಮ, ತಮ್ಮ ಊರುಗಳಿಗೆ ಹೊರಟಿದ್ದಾರೆ. ಮತದಾನದ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ಬೆಂಗಳೂರಿನ(Bangalore) ಹಲವು ಬಸ್ ನಿಲ್ದಾಣಕ್ಕೆ ಧಾವಿಸಿದ್ದಾರೆ. ಬೆಂಗಳೂರಿನ ಬಹುತೇಕ ಬಸ್ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಹಾಸನ, ತುಮಕೂರು, ಮಂಡ್ಯ, ಶಿರಾ, ಚಿತ್ರದುರ್ಗ, ಮೈಸೂರು, ರಾಮನಗರ ಭಾಗಕ್ಕೆ ತೆರಳುತ್ತಿದ್ದಾರೆ. ಬಸ್ಗಳು ನಿಲ್ದಾಣಕ್ಕೆ ಬಂದ ಕೂಡಲೇ ಕೆಲವೇ ಕ್ಷಣದಲ್ಲಿ ತುಂಬಿ ಹೋಗುತ್ತಿವೆ.
ಕೆಲ ಊರುಗಳಿಗೆ ತೆರಳಲು ಬಸ್ ಸಿಕ್ಕಿದ್ರೆ, ಕೆಲವು ಭಾಗಗಳಿಗೆ ತೆರಳಲು ಜನರು ಬಸ್ಗಾಗಿ ಕಾದು ಕುಳಿತಿದ್ದಾರೆ. KSRTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸೀಟ್ ಹಿಡಿಯಲು ನಾ ಮುಂದು, ತಾ ಮುಂದು ಅಂತಾ ಮುಗಿಬಿದ್ದಿದ್ದಾರೆ. ನೂಕು ನುಗ್ಗಲಿನಲ್ಲೇ ಬಸ್ ಸೀಟ್ ಹಿಡಿದ ಮತದಾರರು ತಮ್ಮ ಊರಿನತ್ತ ತೆರಳುತ್ತಿದ್ದಾರೆ. ಎಷ್ಟೋ ಜನರಿಗೆ ಸೀಟ್ಗಳು ಸಿಗದೆ ಪರದಾಡುತ್ತಿದ್ದಾರೆ. ನಾಳೆ ಬೆಳಗ್ಗೆವರೆಗೂ ಬಸ್ ನಿಲ್ದಾಣಗಳಲ್ಲಿ ಇದೇ ರೀತಿ ರಶ್ ಆಗುವ ಸಾಧ್ಯತೆ ಇದೆ. ಬಸ್ಗಳಲ್ಲಿ ಸೀಟ್ ಹಿಡಿಯಲು ಪ್ರಯಾಣಿಕರು ಹರಸಾಹಸ ಮಾಡುತ್ತಿದ್ದಾರೆ.