ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸಿ ಚುನಾವಣೆ ನಡೆಸುವ ತಂತ್ರ ನಡೆಯುತ್ತಿದೆ. ಆದರೆ ಯಾರೂ ಎದೆಗುಂದಬಾರದು. ಯುವ ಜನರಲ್ಲಿ ಧೈರ್ಯ ತುಂಬವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಯುವ ಜನತಾದಳದ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಯ ನೀಡಿದರು.
ರಾಜಕಾರಣದಿಂದ ಅಂತರ ಕಾಯ್ದಕೊಂಡಿದ್ದ ಯುವ ಮುಖಂಡರಾದ ಮಂಚನಬಲೆ ಮಧು ಹಾಗೂ ಅಂಗರೇಖನಹಳ್ಳಿ ರವಿಕುಮಾರ್ ಅವರ ಮನೆಗಳಿಗೆ ಭೇಟಿ ನೀಡಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹುರಿದುಂಬಿಸಿದರು. ಪಕ್ಷದ ಬೆಳವಣಿಗೆ ಹಾಗೂ ಗೆಲುವಿಗೆ ಯುವಪಡೆಯನ್ನು ಚುರುಕುಗೊಳಿಸಲು ಇಬ್ಬರು ಜವಾಬ್ದಾರಿ ತೆಗೆದುಕೊಳ್ಳುವಂತೆ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಭಯಪಡುವ ಅಗತ್ಯವಿಲ್ಲ:
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಒಲವಿದೆ. ಜೆಡಿಎಸ್ ಪಕ್ಷದ ಬದ್ರಕೋಟೆ ಚಿಕ್ಕಬಳ್ಳಾಪುರ. ಆದ್ರೆ ಇಲ್ಲಿ ಈ ಬಾರಿ ಹಣಬಲ ಹಾಗೂ ಸ್ವಾಭಿಮಾನದ ಮಧ್ಯೆ ಪೈಪೋಟಿ ನಡೆಯುತ್ತಿದೆ. ಯಾರ ಹೆದರಿಕೆಗೂ ಯಾರೂ ಭಯಪಡುವ ಅಗತ್ಯವಿಲ್ಲ. ನಿಮ್ಮ ಜೊತೆಗೆ ನಾನಿದ್ದೇನೆ. ಎಲ್ಲರೂ ಸೇರಿ ಪಕ್ಷವನ್ನು ಸಂಘಟಿಸಿ ಈ ಬಾರಿ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡರನ್ನು ಗೆಲ್ಲಿಸಿಕೊಳ್ಳೋಣ ಎಂದರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರು ಪ್ರಾಮಾಣಿಕರು. ಆದರೆ ವಿಧಾನಸಭಾ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಇದಕ್ಕೆಲ್ಲಾ ಯಾರೂ ಹೆದರುವ ಅಗತ್ಯವಿಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ದಿನೆ ದಿನೇ ಗಟ್ಟಿಯಾಗುತ್ತಿದೆ. ಕಳೆದ 45 ದಿನಗಳಿಂದ ಮನೆ ಮನೆಗೆ ಭೇಟಿ ನೀಡುತ್ತಿರುವ ಮಾಜಿ ಶಾಸಕ ಬಚ್ಚೇಗೌಡರು ಜನರಲ್ಲಿ ವಿಶ್ವಾಸಗಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ಹಣ ಮತ್ತು ಸ್ವಾಭಿಮಾನದ ಮಧ್ಯೆ ಕದನ ನಡೆಯುತ್ತಿದೆ. ಮಾಜಿ ಶಾಸಕ ಬಚ್ಚೇಗೌಡರು ಕೈ ಕಟ್ಟಿ ಕುಳಿತಿಲ್ಲ. ಮನೆ ಮನೆಗೆ ಭೇಟಿ ಮಾಡಿ ಮತದಾರರ ಮನವೊಲಿಸುತ್ತಿದ್ದಾರೆ. ಅವರೇನು ಇನ್ನೊಬ್ಬರ ಹಾಗೆ 50 ಲಕ್ಷಕ್ಕೋ ಒಂದು ಕೋಟಿಗೆ ಮಾರಾಟವಾಗುವ ವಸ್ತುವಲ್ಲ. ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸಿ ಗೆಲ್ಲುವ ಕನಸು ಕಾಣುತ್ತಿರುವವರಿಗೆ ಸೋಲಿನ ರುಚಿ ತೋರಿಸುತ್ತಾರೆ. ನಾನು ಯುವಕರ ಹಿಂದೆ ಇದ್ದು ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದರು.
ಈ ವೇಳೆ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಾತ್ಯತೀತ ಜನತಾದಳ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಮುಖಂಡರಾದ ವೆಂಕಟೇಶ್, ರಾಜಾಕಾಂತ್, ಯುವ ಮುಖಂಡರಾದ ಮಂಚನಬಲೆ ಮಧು, ಅಂಗರೇಖನಹಳ್ಳಿ ರವಿ, ಅಕಿಲ್ ರೆಡ್ಡಿ, ವೀಣಾರಾಮು, ನಾರಾಯಣಗೌಡ, ಪ್ರಭಾನಾರಾಯಣಗೌಡ ಸೇರಿದಂತೆ ಹಲವರಿದ್ದರು.