ಶಿಡ್ಲಘಟ್ಟ: ಪ್ರಜಾಪ್ರಭುತ್ವಕ್ಕೆ ಚುನಾವಣೆ ಮತ್ತು ಮತದಾನವೇ ಹಬ್ಬವಾಗಿದ್ದು, ಚುನಾವಣೆಯನ್ನು ಸ್ವಾಗತಿಸಿ ನಮ್ಮ ಮನೆ ಮತ್ತು ಗ್ರಾಮಗಳಲ್ಲಿ ಮತದಾನದ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ತಿಳಿಸಿದರು.
ತಾಲೂಕಿನ ಚಾಗೆ ಗ್ರಾಮದ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿದ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ “ಮತದಾನಕ್ಕಿಂತ ಮತ್ತೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುತ್ತೇನೆ” ಎಂಬ ತಾಲೂಕು ಸ್ವೀಪ್ ಸಮಿತಿಯ ಘೋಷ ವಾಕ್ಯವನ್ನು ಉಚ್ಚರಿಸುವ ಮೂಲಕ ನೆರೆದಿದ್ದ ಸಾರ್ವಜನಿಕರಿಗೆ ಮತದಾನ ದ ಪ್ರತಿಜ್ಞೆಯನ್ನು ಬೋಧಿಸಿದರು.
ನಂತರ ಮಾತನಾಡಿದ ಅವರು ಆಡಳಿತವನ್ನು ಗ್ರಾಮಗಳ ಮನೆ ಬಾಗಿಲಿಗೆ ತರುವ ಉದ್ದೇಶದಿಂದ ಕಾರ್ಯಕ್ರಮ ನಡೆಸುತ್ತಿದ್ದು, ಸಾರ್ವಜನಿಕರು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಕಂದಾಯ ಇಲಾಖೆ ಗ್ರೇಡ್ 2 ತಹಶಿಲ್ದಾರ್ ಶ್ರೀನಿವಾಸಲು ನಾಯ್ಡು ಅಬ್ಲೂಡು ಪಶುವೈದ್ಯಕೀಯ ಇಲಾಖೆ ಕಟ್ಟಡಕ್ಕೆ ಮೂರು ಕುಂಟೆ ಹಾಗು ವಿವಿಧೋದ್ದೇಶಗಳಿಗೆ ಒಟ್ಟು 30 ಕುಂಟೆ ಜಮೀನನ್ನು ತಾಲೂಕು ಪಂಚಾಯ್ತಿಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ಫಲಾನುಭವಿಗಳಿಗೆ ಮಾಶಾಸನ ಮಂಜೂರು ಪತ್ರಗಳನ್ನು ವಿತರಿಸಿದರು. ಹಾಗೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗೈರು ಹಾಜರಾಗಿದ್ದಕ್ಕೆ ಅಸಮಾಧಾನಗೊಂಡರು
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ರವಿಪ್ರಕಾಶ್, ಕೆರೆ, ರಾಜ ಕಾಲುವೆ ಗುಂಡು ತೋಪು ಒತ್ತುವರಿ ಕಾರ್ಯಗಳನ್ನು ಕನಿಷ್ಠ ಒಂದು ವಾರದ ಹಿಂದೆ ತೆರವುಗೊಳಿಸಿ ಕಾರ್ಯಕ್ರಮ ಮಾಡಿದ್ದರೆ ಸಂತೋಷ ಆಗುತ್ತಿತ್ತು, ತಾಲೂಕು ಪೂರ್ತಿ ಅಲ್ಲದಿದ್ದರೂ ತಾವು ಕಾರ್ಯಕ್ರಮ ಆಯೋಜನೆ ಮಾಡುವ ಗ್ರಾ ಪಂ ಗಳ ವ್ಯಾಪ್ತಿಯಲ್ಲಿ ಯಾದರೂ ತೆರವು ಕಾರ್ಯ ಮಾಡಬೇಕಾಗಿತ್ತು, ಕೇವಲ ಮನರಂಜನೆಗಾಗಿ ಕಾರ್ಯಕ್ರಮ ಮಾಡುವುದು ಬೇಡ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.