ಶಿಡ್ಲಘಟ್ಟ: ಸ್ವಂತ ದುಡಿಮೆಯಿಂದ ಕ್ಷೇತ್ರದಾದ್ಯಂತ ಇಷ್ಟೊಂದು ಸೇವೆ ಮಾಡಲು ಸಾಧ್ಯವಾಗಿರುವಾಗ ಶಾಸಕರಾದರೆ ಇನ್ನೂ ಹೆಚ್ಚಿನ ಸೇವೆ ಮಾಡಲಿದ್ದಾರೆ ಎಂಬುದನ್ನು ಜನರು ಮನಗಂಡು ಈ ಬಾರಿ ರಾಜೀವ್ ಗೌಡರಿಗೆ ಅಧಿಕಾರ ಕೊಡಬೇಕು ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಜನರಿಗೆ ಮನವಿ ಮಾಡಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯ ಅಮೀರ್ ಬಾಬಾ ಮಸೀದಿ ಬಳಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಕುಡಿಯುವ ನೀರಿನಿಂದ ಆಂಬ್ಯುಲೆನ್ಸ್, ದಿನಸಿ ಹೀಗೆ ಹತ್ತು ಹಲವು ಸೇವಾ ಕಾರ್ಯಗಳನ್ನು ಕ್ಷೇತ್ರದ ಜನತೆಗೆ ಕೊಟ್ಟಿರುವ ರಾಜೀವ್ ಗೌಡ ತಮ್ಮ ಜನ್ಮದಿನವನ್ನು ಬಡವರ ಜೊತೆ ಆಚರಿಸಿಕೊಳ್ಳುತ್ತಿರುವುದಲ್ಲದೇ ಉಚಿತವಾಗಿ ಆರೋಗ್ಯ ತಪಾಸಣೆ, ಉದ್ಯೋಗ ಮೇಳವನ್ನು ಏರ್ಪಡಿಸಿರುವುದು ಶ್ಲಾಘನೀಯ, ಕಾಂಗ್ರೆಸ್ ಪಕ್ಷದ ಪರವಾಗಿ ಅವರಿಗೆ ಧನ್ಯವಾದಗಳನ್ನು ಬಯಸುತ್ತೇನೆ ಎಂದರು.
ನಂತರ ಮಾತನಾಡಿದ ರಾಜೀವ್ ಗೌಡ ಶಿಡ್ಲಘಟ್ಟ ಕ್ಷೇತ್ರ ಆರ್ಥಿಕವಾಗಿ ಹಿಂದುಳಿದಿದ್ದು, ಬಹುತೇಕ ಒಣ ಬೇಸಾಯ, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನನ್ನ ಜನ್ಮದಿನವನ್ನು ಆಡಂಬರದಿಂದ ಆಚರಿಸಿಕೊಳ್ಳದೇ ಬಡವರ ಸೇವೆ ಮಾಡಲು ನಿಶ್ಚಯಿಸಿ ಈ ಹಿಂದೆ ಭರವಸೆ ನೀಡಿದ್ದಂತೆ ವಿದ್ಯಾವಂತ ಯುವ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇನೆ, ಬಡಜನರು ತಮ್ಮ ದಿನ ನಿತ್ಯದ ಕೆಲಸಗಳ ನಡುವೆ ಆರೋಗ್ಯವನ್ನು ನಿರ್ಲಕ್ಷಿಸಿ ಅಗತ್ಯ ಚಿಕಿತ್ಸೆಯನ್ನು ಮುಂದೂಡುತ್ತಾರೆ, ಅಂಥವರ ಬಳಿಗೆ ನುರಿತ ತಜ್ಞರನ್ನು ಕರೆತಂದು ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿಸಿ ತಗಲುವ ಸಂಪೂರ್ಣ ವೆಚ್ಚವನ್ನು ಭರಿಸಲಿದ್ದೇನೆ ಎಂದರು. ಕಣ್ಣಿನ ಸಮಸ್ಯೆ ಇದ್ದವರಿಗೆ ಉಚಿತ ಕನ್ನಡಕ ಹಾಗು ಉದ್ಯೋಗ ಪಡೆದವರಿಗೆ ವೇದಿಕೆಯಲ್ಲಿ ನೇಮಾಕಾತಿ ಪತ್ರಗಳನ್ನು ವಿತರಿಸಲಾಯಿತು.ಈ ಸಂಧರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ನಗರಸಭೆ ಸದಸ್ಯರಾದ ಅಪ್ಸರ್ ಪಾಷ ಇನ್ನಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.