ನಟ ಸೈಫ್ ಅಲಿ ಖಾನ್ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಇಡೀ ಚಿತ್ರರಂಗವನ್ನೆ ಬೆಚ್ಚಿ ಬೀಳಿಸಿದೆ. ನೆಚ್ಚಿನ ನಟನ ಮೇಲಾಗಿರುವ ಹಲ್ಲೆಯ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದೀಗ ಪ್ರಕರಣಕ್ಕೆ ಎನ್ಕೌಂಟರ್ ಸ್ಪೆಷಲಿಸ್ಟ್, ಕರ್ನಾಟಕ ಮೂಲದ ದಯಾ ನಾಯಕ್ ಎಂಟ್ರಿಕೊಟ್ಟಿದ್ದಾರೆ.
ಸೈಫ್ ಅಲಿ ಖಾನ್ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಆರೋಪಿಯ ಶೋಧ ಕಾರ್ಯಕ್ಕೆ ಇಳಿದಿದ್ದಾರೆ. ಈಗಾಗಲೇ ಶಂಕಿತ ಆರೋಪಿಯ ಫೋಟೋ ಬಿಡುಗಡೆ ಮಾಡಲಾಗಿದೆ. ಇದೀಗ ಪ್ರಕರಣಕ್ಕೆ ದಯಾ ನಾಯಕ್ ಎಂಟ್ರಿಕೊಟ್ಟಿದ್ದು ಆಸ್ಪತ್ರೆಯಲ್ಲಿಯರುವ ಸೈಫ್ ಅಲಿ ಖಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ದಯಾನಾಯಕ್ ಅವರು ಇಂದು (ಜನವರಿ 17) ಸೈಫ್ ಅಲಿ ಖಾನ್ ಅನ್ನು ದಾಖಲು ಮಾಡಿರುವ ಲೀಲಾವತಿ ಆಸ್ಪತ್ರೆ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೂ ಮುಂಚೆ ಅವರು ಸೈಫ್ ಅಲಿ ಖಾನ್ ಅವರ ಬಾಂದ್ರಾದ ಮನೆಗೂ ಭೇಟಿ ನೀಡಿದ್ದು ಅಲ್ಲಿಯೂ ಸಹ ತನಿಖೆ ನಡೆಸಿದ್ದಾರೆ.
ಜನವರಿ 16 ರಂದು ಹಲವು ಪೊಲೀಸ್ ಅಧಿಕಾರಿಗಳು ಸೈಫ್ ಅಲಿ ಖಾನ್ ಅವರ ಬಾಂದ್ರಾದ ಅಪಾರ್ಟ್ಮೆಂಟ್ಗೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಈ ವೇಳೆ ಎನ್ಕೌಂಟರ್ ದಯಾನಾಯಕ್ ಸಹ ಆಗಮಿಸಿದ್ದರು. ಸೈಪ್ ಅಲಿ ಖಾನ್ ಪ್ರಕರಣದ ತನಿಖೆಗೆ ಮಾಡಲಾಗಿರುವ ಏಳು ತಂಡಗಳಲ್ಲಿ ಒಂದು ತಂಡದ ಜವಾಬ್ದಾರಿ ಎನ್ಕೌಂಟರ್ ದಯಾನಾಯಕ್ ಅವರು ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕದ ಉಡುಪಿಯವರಾದ ದಯಾನಾಯಕ್ ಸಣ್ಣ ವಯಸ್ಸಿನಲ್ಲೇ ಮುಂಬೈಗೆ ಹೋಗಿ ಅಲ್ಲಿ ಕೆಲಸ ಮಾಡಲು ಆರಂಭಿಸಿದರು. ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಘಳಿಸಿರುವ ದಯಾ ನಾಯಕ್ ಭೂಗತ ಪಾತಕಿಗಳಿಗೆ ದುಸ್ವಪ್ನವಾಗಿ ಕಾಡಲು ಆರಂಭಿಸಿದರು. ಚೋಟಾ ರಾಜನ್, ಚೋಟಾ ಶಕೀಲ್ ಇನ್ನಿತರೆ ಕೆಲವು ಪಾತಕಿಗಳ ಕಡೆಯವರನ್ನು ಸಿಕ್ಕ-ಸಿಕ್ಕಲ್ಲಿ ಕೊಂದು ಸುದ್ದಿಯಾದರು. ಇದೀಗ ಸೈಫ್ ಪ್ರಕರಣಕ್ಕೆ ದಯಾ ನಾಯಕ್ ಎಂಟ್ರಿಕೊಟ್ಟಿದ್ದು ತನಿಖೆಗೆ ಮತ್ತಷ್ಟು ಬಲ ಬಂದಂತಾಗಿದೆ.
