ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಇದ್ದ ಶೇ. 50 ರಷ್ಟು ರಿಯಾಯಿತಿ ಅವಕಾಶ ನಿನ್ನೆ ಮುಕ್ತಾಯಗೊಂಡಿದೆ. ಇದೇ ತಿಂಗಳ ಮಾರ್ಚ್ 4ರಿಂದ 18ರವರೆಗಿನ ಅವಧಿಯಲ್ಲಿ ₹ 4.25 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹ 12.31 ಕೋಟಿ ದಂಡ ಸಂಗ್ರಹವಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವನೆ ಒಪ್ಪಿದ್ದ ರಾಜ್ಯ ಸರ್ಕಾರ,
ಮೊದಲ ಸುತ್ತಿನಲ್ಲಿ ಫೆ. 3ರಿಂದ 11ರವರೆಗೆ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿತ್ತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ, ಎರಡನೇ ಸುತ್ತಿನಲ್ಲಿ ರಿಯಾಯಿತಿ ವಿಸ್ತರಿಸಲಾಗಿತ್ತು. ನಗರದ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್- ಬೆಂಗಳೂರು ಒನ್ ಕೇಂದ್ರಗಳಲ್ಲಿ ಜನರು ದಂಡ ಪಾವತಿಸಿದ್ದಾರೆ. ಪೇಟಿಎಂ ಮೂಲಕವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಂಡ ಕಟ್ಟಿದ್ದಾರೆ.