ಬೆಂಗಳೂರು: ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರೀ ಹೂಡಿಕೆ ಸುಳಿವು ಸಿಕ್ಕಿದ್ದು, 2030ರ ವೇಳೆಗೆ 32.5 ಲಕ್ಷ ಕೋಟಿ ರೂ. ಮೌಲ್ಯದ ಸಾಲಗಳನ್ನು ನೀಡಲು ಬ್ಯಾಂಕ್ಗಳ ಬದ್ಧವಾಗಿದೆ ಎಂದು ಸಚಿವಾಲಯ ನೀಡಿದ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್ ಪೋ ಆಯೋಜಿಸಿದ್ದು ಇಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲಾಗುತ್ತಿದೆ.
ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಒದಗಿಸಿದ ಡೇಟಾ ಪ್ರಕಾರ ಆರ್ಇ ಇನ್ವೆಸ್ಟ್ 2024 ರ ಸಮಾವೇಶದಲ್ಲಿ 6 ಟ್ರಿಲಿಯನ್ ರೂ. ಮೌಲ್ಯದ ಸಾಲ ಒದಗಿಸುವ ಪ್ರಸ್ತಾಪಗಳು ಬಂದಿದೆ. ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಈಆರ್ಇಡಿಎ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಲಾ 5 ಲಕ್ಷ ಕೋಟಿ ರೂ. ಮೌಲ್ಯದ ಸಾಲ ನೀಡುವ ವಾಗ್ದಾನ ಮಾಡಿದೆ.
ಪವರ್ ಫೈನಾನ್ಸ್ ಕಾರ್ಪೊರೇಷನ್ ಮತ್ತು ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್ಫ್ರಾಸ್ಟ್ರಕ್ಚರ್ ಮತ್ತು ಡೆವಲಪ್ಮೆಂಟ್ ಕ್ರಮವಾಗಿ 3 ಟ್ರಿಲಿಯನ್ ರೂ. ಮತ್ತು 1.86 ಟ್ರಿಲಿಯನ್ ರೂ. ಸಾಲ ನೀಡುವುದಾಗಿ ಭರವಸೆ ನೀಡಿವೆ. ಈ ಬಗ್ಗೆ ಮಾತನಾಡಿರುವ ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ, ಈ ದಶಕದ ಅಂತ್ಯದ ವೇಳೆಗೆ ನವೀಕರಿಸಬಹುದಾದ ಇಂಧನ ಕಂಪನಿಗಳು ಸುಮಾರು 32.5 ಟ್ರಿಲಿಯನ್ ರೂ. ಹೂಡಿಕೆ ಮಾಡಲು ಬದ್ಧವಾಗಿವೆ. ಭಾರತವು ಐದನೇ ದೊಡ್ಡದು ಮಾತ್ರವಲ್ಲದೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಬೆಳವಣಿಗೆಯು ಶಕ್ತಿಯ ಅಭೂತಪೂರ್ವ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಈ ಬೇಡಿಕೆಯನ್ನು ಸುಸ್ಥಿರವಾಗಿ ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದರು. 2030ರ ವೇಳೆಗೆ ಸುಮಾರು 570 ಜಿಡಬ್ಯೂ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ಸರ್ಕಾರ ಹೊಂದಿದೆ.
ಈ ನಡುವೆ ನವೀಕರಿಸಬಹುದಾದ ಇಂಧನ ಸಚಿವಾಲಯದ 100 ದಿನಗಳ ಸಾಧನೆ ಬಿಡುಗಡೆ ಮಾಡಿದೆ. 4.5 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಬೇಕೆಂಬ ಜೂನ್, ಜುಲೈ ತಿಂಗಳ ಗುರಿಗೆ ಪೂರಕವಾಗಿ 6 ಗಿ.ವ್ಯಾ. ಸ್ಥಾಪಿತ ಇಂಧನ ಸಾಮರ್ಥ್ಯ ಹೊಂದಲಾಗಿದೆ. ಕಚ್ಚಾ ಅಲ್ಲದ ಇಂಧನಗಳ ಸ್ಥಾಪಿತ ಸಾಮರ್ಥ್ಯ 207.76 ಗಿ.ವ್ಯಾಟ್ ಗೆ ತಲುಪಿದೆ. ಎರಡು ಸೋಲಾರ್ ಪಾರ್ಕ್ಗಳು ಪೂರ್ಣಗೊಂಡಿವೆ.
ಪಿಎಂ ಕುಸುಮ್ ಯೋಜನೆ ಅಡಿಯಲ್ಲಿ 1 ಲಕ್ಷ ಸೌರ ಪಂಪ್ಗಳನ್ನು ಸ್ಥಾಪಿಸಲಾಗಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿಯಲ್ಲಿ, 3.56 ಲಕ್ಷ ರೂಫ್ಟಾಪ್ ಸೋಲಾರ್ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಸಂಚಿತ 13.8 ಗಿಗಾ ವ್ಯಾಟ್ ಸೋಲಾರ್ ಮಾಡ್ಯೂಲ್ ಉತ್ಪಾದನೆ ಪ್ರಾರಂಭವಾಗಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಎರಡನೇ ಹಂತದ ಎಲೆಕ್ಟ್ರೋಲೈಸರ್ ತಯಾರಿಕೆಗೆ 11 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ.