ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ ದಂದು ಅಚ್ಚರಿ ಎನ್ನುವಂತೆ ಸಲಿಂಗಿ ಗೆಳತಿಯ ಜತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. 2014ರಲ್ಲಿ ವಿರಾಟ್ ಕೊಹ್ಲಿಗೆ ಪ್ರೇಮ ನಿವೇದನೆ ಮಾಡಿದ್ದ ಡೇನಿಯಲ್ ವ್ಯಾಟ್, ಇದೀಗ ಗೆಳತಿ ಜಾರ್ಜಿ ಹಾಡ್ಜ್ ಜತೆಗೆ ಎಂಗೇಟ್ಮೆಂಟ್ ಮಾಡಿಕೊಳ್ಳುವ ಮೂಲಕ ಕ್ರಿಕೆಟ್ ಜಗತ್ತಿಗೆ ಅಚ್ಚರಿ ನೀಡಿದ್ದಾರೆ.
ಜಾರ್ಜಿ ಹಾಡ್ಜ್, ಸಿಎಎ ಬೇಸ್ ಮಹಿಳಾ ಫುಟ್ಬಾಲ್ ಹೆಡ್ ಆಗಿ ಗುರುತಿಸಿಕೊಂಡಿದ್ದಾರೆ. ಡೇನಿಯಲ್ ವ್ಯಾಟ್, ಕೇಪ್ಟೌನ್ನಿಂದಲೇ ಈ ತಮ್ಮ ಎಂಗೇಜ್ಮೆಂಟ್ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾವು ಆತಿಥ್ಯವನ್ನು ವಹಿಸಿತ್ತು. ಡೇನಿಯಲ್ ವ್ಯಾಟ್, ಇಂಗ್ಲೆಂಡ್ ತಂಡದ ಪ್ರಮುಖ ಸದಸ್ಯೆಯಾಗಿದ್ದರು. ಇಂಗ್ಲೆಂಡ್ ತಂಡವು ಸೆಮಿಫೈನಲ್ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು.
ಇದೀಗ ಡೇನಿಯಲ್ ವ್ಯಾಟ್ ಹಾಗೂ ಜಾರ್ಜಿ ಹಾಡ್ಜ್ ಲಿಪ್ಲಾಕ್ ಮಾಡಿಕೊಳ್ಳುವುದರ ಜತೆಗೆ ಉಂಗುರದ ಬೆರಳು ತೋರಿಸಿ, “ಎಂದೆಂದಿಗೂ ನನ್ನದೇ” ಎನ್ನುವ ಸಂದೇಶವನ್ನು ಈ ಸಲಿಂಗಿ ಜೋಡಿ ಸಾರಿದೆ. ಡೇನಿಯಲ್ ವ್ಯಾಟ್, ಕೆಲಕಾಲ ಕ್ರಿಕೆಟ್ನಿಂದ ಬಿಡುವು ಪಡೆದುಕೊಳ್ಳುವ ಸಾಧ್ಯತೆಯಿದೆ. ಇನ್ನು ಇತ್ತೀಚೆಗಷ್ಟೇ ನಡೆದ ಚೊಚ್ಚಲ ಆವೃತ್ತಿಯ ವುಮೆನ್ಸ್,
ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರ್ತಿಯರ ಹರಾಜಿನಲ್ಲಿ ಡೇನಿಯಲ್ ವ್ಯಾಟ್ ಅನ್ಸೋಲ್ಡ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಆದರೆ ಡೇನಿಯಲ್ ವ್ಯಾಟ್ ಅವರಿಗೆ ಡಬ್ಲ್ಯೂಪಿಎಲ್ ಹಾದಿ ಸಂಪೂರ್ಣ ಮುಚ್ಚಿದೆ ಎಂದರ್ಥವಲ್ಲ, ಯಾವುದಾದರೂ ಆಟಗಾರ್ತಿ ಟೂರ್ನಿಗೆ ಅಲಭ್ಯರಾದರೇ, ಫ್ರಾಂಚೈಸಿಯು ಬಯಸಿದರೇ, ವ್ಯಾಟ್ ಯಾವುದಾದರೂ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.