ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಒತ್ತಡದ ನಡುವೆಯೂ ಐಪಿಎಲ್ ಮ್ಯಾಚ್ ವೀಕ್ಷಿಸುತ್ತಾ ಕಾಲ ಕಳೆದಿದ್ದಾರೆ.16ನೇ ಆವೃತ್ತಿಯ ಐಪಿಎಲ್ ಆರಂಭಗೊಂಡಿದ್ದು, ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಸೆಣಸಾಟ ನಡೆದಿತ್ತು. ಕ್ರೀಡಾಂಗಣದ ತುಂಬಾ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರು. ಈ ಪಂದ್ಯ ವೀಕ್ಷಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಆಪ್ತರೊಂದಿಗೆ ತೆರಳಿ ಪಂದ್ಯ ವೀಕ್ಷಣೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ತಂಡ ಆರಂಭದಲ್ಲಿ ಅಮೋಘ ಯಶಸ್ಸು ಸಾಧಿಸಿದರೂ ಬಳಿಕ ರೋಹಿತ್ ಪಡೆಯಿಂದ ಅದ್ಭುತ ಹೋರಾಟ ವ್ಯಕ್ತವಾಯಿತು. ಹೀಗಾಗಿ ಆರ್ಸಿಬಿ ತಂಡಕ್ಕೆ ಗೆಲ್ಲಲು ಮುಂಬೈ ಇಂಡಿಯನ್ಸ್ ತಂಡ ಸವಾಲಿನ ಗುರಿ ನೀಡಿತು. ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮ್ಯಾನ್ಗಳು ಆರ್ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿದರೂ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಆರ್ಸಿಬಿ ತಂಡದ ಲೆಕ್ಕಾಚಾರ ಬುಡಮೇಲಾಯಿತು. ಪರಿಣಾಮ ಮುಂಬೈ ಇಂಡಿಯನ್ಸ್ ತಂಡ ಆರ್ಸಿಬಿಗೆ ಈ ಪಂದ್ಯದಲ್ಲಿ ಗೆಲ್ಲಲು 172 ರನ್ಗಳ ಸವಾಲಿನ ಗುರಿ ನಿಗದಿಪಡಿಸಿದೆ.