ಮಂಡ್ಯ : ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಕರ್ತವ್ಯವಲ್ಲ. ಪ್ರಕೃತಿಯ ಪ್ರಯೋಜನವನ್ನು ಪಡೆಯುತ್ತಿರುವ ಪ್ರತಿಯೊಬ್ಬರ ಮೇಲೂ ಪರಿಸರ ಉಳಿಸುವ ಜವಾಬ್ದಾರಿ ಇದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ಪಟ್ಟಣದ ಹೆಚ್.ಕೆ.ವೀರಣ್ಣಗೌಡ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಮ್ಮ ಪೂರ್ವಿಕರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಅವರಿಗೆ ಮರ ಗಿಡಗಳ ಮಹತ್ವ ಗೊತ್ತಿತ್ತು. ಹೀಗಾಗಿ ಹಿಂದೆಲ್ಲ ಒಂದು ಮರ ಕಡಿದರೆ, ಮತ್ತೊಂದು ಗಿಡ ನೆಡುತ್ತಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಯುವ ಜನತೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಹೆಚ್ಚು ಹೆಚ್ಚು ಕಾಡು ಬೆಳೆಸಬೇಕು. ಆಗ ಮಾತ್ರ ಪ್ರಕೃತಿ ವಿಕೋಪಗಳ ಸಂಖ್ಯೆ ಕಡಿಮೆ ಮಾಡಬಹುದು. ಇದು ಕೇವಲ ಅಧಿಕಾರಿಗಳ ಕೆಲಸ ಮಾತ್ರವಲ್ಲ, ಜನರ ಜವಾಬ್ದಾರಿಯು ಇದೆ ಎಂದು ಅಭಿಪ್ರಾಯಪಟ್ಟರು.
ವಿಧ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಅನಿರ್ವಾಯತೆ ಬಗ್ಗೆ ಅರಿವನ್ನು ಮೂಡಿಸಿಕೊಂಡು ಗ್ರಾಮೀಣ ಪ್ರದೇಶದ ಜನರಲ್ಲೂ ಕೂಡ ಅರಿವು ಮೂಡಿಸುವಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಮನುಷ್ಯ ಪ್ರಕೃತಿಯ ಅವಿಭಾಜ್ಯ ಅಂಗ. ಪ್ರಕೃತಿಯನ್ನು ನಾಶ ಮಾಡುವುದು ನಮ್ಮನ್ನು ನಾವು ನಾಶ ಮಾಡಿಕೊಂಡಂತೆ. ಹೀಗಾಗಿ ಪರಿಸರದ ಜತೆಗೆ ನಾವು ಬೆಳೆಯಬೇಕು, ಬಾಳಬೇಕು. ಪರಿಸರದ ಸಮಸ್ಯೆಯನ್ನು ನಿಯಂತ್ರಿಸಲು, ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವಾದಾದ್ಯಂತ ಪರಿಸರ ದಿನಾಚರಣೆ ಆಚರಿಸುತ್ತಿದ್ದೇವೆ. ಪ್ರಕೃತಿ ಚೆನ್ನಾಗಿದ್ದರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಪ್ರತಿಯೊಬ್ಬರೂ ನಮ್ಮ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸರ್ಕಾರ ಎಷ್ಟೇ ಕಾನೂನು ಮಾಡಿದರೂ, ಜನರಲ್ಲಿ ಜಾಗೃತಿ ಮೂಡದಿದ್ದರೆ ಉದ್ದೇಶ ಸಫಲವಾಗುವುದಿಲ್ಲ ಎಂದು ಹೇಳಿದರು.
ಬದುಕಿನಲ್ಲಿ ಬಹಳಷ್ಟು ಜನರು ಪ್ರಕೃತಿಯ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ಪ್ರತಿಯೊಬ್ಬರೂ ಪ್ರಕೃತಿ, ಭೂಮಿ ತಾಯಿಯನ್ನು ಪ್ರೀತಿಸುವುದು ಕರ್ತವ್ಯ ಎಂದು ಭಾವಿಸಬೇಕು. ಈ ಭೂಮಿ ಉಪಯೋಗಿಸಿಕೊಂಡು ನಾವು ಬದುಕುತ್ತಿದ್ದೇವೆ. ಹೀಗಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಆದಷ್ಟು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಪರಿಸರವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು. ಪ್ರಕೃತಿ ಆರೋಗ್ಯಕರವಾಗಿದ್ದರೆ ಮಾತ್ರ, ನಾವು ಆರೋಗ್ಯಕರವಾಗಿ ಬದುಕಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಪುರಸಭೆ ಮುಖ್ಯಾಧಿಕಾರಿ ಆರ್.ಅಶೋಕ್, ವಲಯ ಅರಣ್ಯಾಧಿಕಾರಿಗಳಾದ ಗವಿಯಪ್ಪ, ಅಭಿಷೇಕ್ ಉಪ ವಲಯ ಅರಣ್ಯಾಧಿಕಾರಿಗಳಾದ ರವಿ, ಮಹೇಶ್, ರತ್ನಾಕರ್, ಸುದರ್ಶನ್ ಪ್ರಾಂಶುಪಾಲ ಶಂಕರೇಗೌಡ, ಶಿವಕುಮಾರ್, ಗುತ್ತಿಗೆದಾರ ದಿನೇಶ್ ಬಾಬು ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ