ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದೀಗ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ್ದು, ಸಂಸದ ಈರಣ್ಣ ಕಡಾಡಿ ವಾಲ್ಮೀಕಿ ಹಗರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಎಸ್ಟಿ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗ ಆಗಿದೆ ಎಂದು ಈರಣ್ಣ ಕಡಾಡಿ ರಾಜ್ಯಸಭೆಯಲ್ಲಿ ಆರೋಪಿಸಿದರು.
ಇದಕ್ಕೆ ಕಾಂಗ್ರೆಸ್ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆಸನದಿಂದ ಎದ್ದು ಗಲಾಟೆ ಮಾಡಿದರು. ಇದೇ ವಿಚಾರವಾಗಿ ಮಾತನಾಡಲು ನಮಗೂ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು.
ಕರ್ನಾಟಕದ ಅಭಿವೃದ್ಧಿಗೆ ಇಟ್ಟ ಹಣ ಹಾಡಹಗಲೇ ಲೂಟಿ ಮಾಡಿದ್ದಾರೆ. 187 ಕೋಟಿ ರೂ. ಹಣ ತೆಲಂಗಾಣ ಚುನಾವಣೆಗೆ ಬಳಕೆ ಮಾಡಲಾಗಿದೆ. ಇದನ್ನು ರಾಜಕೀಯ ಮಾಡೋಕೆ ಕಾಂಗ್ರೆಸ್ ಹೊರಟಿದೆ. ಹಾಗಾಗಿ ಈ ಸದನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಡಾಡಿ ಆಗ್ರಹಿಸಿದರು. ಈರಣ್ಣ ಕಡಾಡಿಯವರ ಈ ಮಾತಿಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇನ್ನು ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ನಿತ್ಯ ಒಂದು ಅವ್ಯವಹಾರ ಹೊರಬರುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಬೇರೆ ಬೇರೆ ಇಲಾಖೆಯ ಹಣ ಬಳಕೆಯಾಗಿದೆ. ವಾಲ್ಮೀಕಿ ನಿಗಮ ಮಂಡಳಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಬೇನಾಮಿ ಖಾತೆಗೆ ಹಣ ಜಮೆಯಾಗುವುದಲ್ಲದೇ ಮದ್ಯ ಖರೀದಿ ಮಾಡಿದೆ. ಶೋಷಿತ ಜನಾಂಗದ ಹಣವನ್ನು ಚುನಾವಣೆಯಲ್ಲಿ ಅಭ್ಯರ್ಥಿಗಳ ಬಳಕೆಗೆ ಬಳಸಿದೆ ಎಂದು ಆರೋಪಿಸಿದರು.
ಮುಡಾದಲ್ಲಿ ಸಿಎಂ ಕುಟುಂಬಸ್ಥರಿಂದ ಅಕ್ರಮವಾಗಿದೆ. ಶೋಷಿತರ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅವರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಬಗ್ಗೆ ನಾನು ರಾಜ್ಯಸಭೆಯಲ್ಲಿ ಮಾತನಾಡಿದ್ದೇನೆ. ಹಣ ದುರುಪಯೋಗದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಸಿದ್ಧವಿಲ್ಲ.
ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿ ಚರ್ಚೆ ಆಗದಂತೆ ನೋಡಿಕೊಂಡಿದೆ. ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ತನಿಖೆಗೆ ಆಗ್ರಹಿಸಿದ್ದೇವೆ. ಎಐಸಿಸಿಗೂ ಕರ್ನಾಟಕದಿಂದ ಹಣ ಹೋಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಇದರಿಂದ ಹೊರ ಬರಲು ಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.