ಅಂಕಾರಾ: ಟರ್ಕಿಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಮತ್ತೊಂದು ಸುತ್ತಿನ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಹಾಲಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಮರು ಆಯ್ಕೆಯಾಗುವ ಮೂಲಕ ಅವರು ತಮ್ಮ ಆಡಳಿತವನ್ನು 3ನೇ ದಶಕಕ್ಕೆ ವಿಸ್ತರಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮೇ 14 ರಂದು ನಡೆದಿದ್ದ ಮತದಾನದಲ್ಲಿ ಎರ್ಡೋಗನ್ ಮತ್ತು ಅವರ ಪ್ರತಿಸ್ಪರ್ಧಿ ಕೆಮಾಲ್ ಕಿಲಿಕ್ಡರೊಗ್ಲ ಗೆಲುವಿಗೆ ಅಗತ್ಯವಿರುವ ಬಹುಮತ ಪಡೆಯದ ಹಿನ್ನೆಲೆಯಲ್ಲಿ 2ನೇ ಸುತ್ತಿನ ಮತದಾನ ನಡೆದಿತ್ತು. ಭಾನುವಾರ ನಡೆದ ಮತದಾನದಲ್ಲಿ ಎರ್ಡೊಗನ್ ಅವರು ವಿರೋಧ ಪಕ್ಷದ ನಾಯಕ ಕೆಮಲ್ ಕಿಲಿಕ್ಡರೊಗ್ಲು ಅವರನ್ನು ಸೋಲಿಸಿದರು. ಭೂಕಂಪಪೀಡಿತ ಪ್ರದೇಶದಲ್ಲೂ ಎರ್ಡೋಗನ್ ಅವರ ಪಕ್ಷ ಪ್ರಾಬಲ್ಯ ಸಾಧಿಸಿತು. ಸಾಂಪ್ರದಾಯಿಕವಾಗಿ ಅಧ್ಯಕ್ಷರನ್ನು ಬೆಂಬಲಿಸುವ ಪ್ರದೇಶದಲ್ಲಿ 11 ಪ್ರಾಂತ್ಯಗಳಲ್ಲಿ 10 ಅನ್ನು ಗೆದ್ದು ಬೀಗಿದೆ.
ಟರ್ಕಿಯ ಸುಪ್ರೀಂ ಎಲೆಕ್ಷನ್ ಕೌನ್ಸಿಲ್ ಘೋಷಿಸಿದ ಪ್ರಾಥಮಿಕ ಅಧಿಕೃತ ಫಲಿತಾಂಶಗಳ ಪ್ರಕಾರ, ಎರ್ಡೊಗನ್ ಶೇ 52.14 ರಷ್ಟು ಮತಗಳನ್ನು ಗಳಿಸುವ ಮೂಲಕ ಗೆದ್ದರು. ಕಿಲಿಕ್ಡರೊಗ್ಲ ಶೇ.47.86 ಮತಗಳನ್ನು ಪಡೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಫಲಿತಾಂಶಗಳನ್ನು ಅಧಿಕೃತಗೊಳಿಸುವ ಮೊದಲು ಎರ್ಡೊಗನ್ ಇಸ್ತಾನ್ಬುಲ್ನಲ್ಲಿರುವ ತನ್ನ ನಿವಾಸದ ಹೊರಗೆ ಪ್ರಚಾರದ ಬಸ್ನ ಮೇಲೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಟರ್ಕಿಯ ಧ್ವಜವನ್ನು ಬೀಸುತ್ತಾ ಹರ್ಷೋದ್ಗಾರ ಮಾಡಿ ಬೆಂಬಲಿಗರ ದೊಡ್ಡ ಗುಂಪನ್ನು ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.