ರಾಮನಗರ: 2023ರ ವಿಧಾನಸಭಾ ಚುನಾವಣೆ (Vidhanasabha Election 2023) ಗೆ ದಿನಾಂಕ ನಿಗದಿ ಹಿನ್ನೆಲೆ ನಿಷ್ಪಕ್ಷಪಾತ ಚುನಾವಣೆಗೆ ರಾಮನಗರ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ರಾಮನಗರ (Ramanagar) ದಲ್ಲಿ ಒಟ್ಟು 8,84,044 ಮತದಾರರಿದ್ದಾರೆ. ಅದರಲ್ಲಿ 4,35,572 ಪುರುಷ ಮತದಾರರು, 4,50,573 ಮಹಿಳಾ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1139 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಈ ಬಾರಿ ಗೋ ಗ್ರೀನ್ ಹಾಗೂ ಚನ್ನಪಟ್ಟಣದ ಗೊಂಬೆಗಳ ಥೀಮ್ ನಲ್ಲಿ ಎರಡು ವಿಶೇಷ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಅಲ್ಲದೇ ಚುನಾವಣಾ ಅಕ್ರಮ ತಡೆಯಲು ಜಿಲ್ಲೆಯಲ್ಲಿ ಒಟ್ಟು 16 ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆಗೆ ಒಟ್ಟು 5775 ಸಿಬ್ಬಂದಿ ನೇಮಕ ಮಾಡಿದ್ದೇವೆ ಎಂದರು.
ಅಲ್ಲದೇ ಪ್ರತಿ ಕ್ಷೇತ್ರ ವ್ಯಾಪ್ತಿಯಲ್ಲಿ 9 ಫ್ಲೈಯಿಂಗ್ ಸ್ವ್ಕಾಡ್ ರಚನೆ ಮಾಡಿ ರಾಜಕೀಯ ಕಾರ್ಯಕ್ರಮಗಳ ಮೇಲೆ ಹದ್ದಿನಕಣ್ಣು ಇಡಲಾಗಿದೆ. ಚುನಾವಣಾ ಅಕ್ರಮದ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಿದ್ದು, ಸಾರ್ವಜನಿಕರು ಕೂಡಾ ಮಾಹಿತಿ ನೀಡಬಹುದಾಗಿದೆ. ಅಲ್ಲದೇ ಚುನಾವಣಾ ಸಮಯದಲ್ಲಿ ಯಾವುದೇ ಅಕ್ರಮ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಐವರು ರೌಡಿಶೀಟರ್ಗಳನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.
ಹಬ್ಬ, ಜಾತ್ರೆಗಳ ಹೆಸರಿನಲ್ಲಿ ರಾಜಕೀಯ ಮುಖಂಡರು ಬಾಡೂಟ ಹಾಕಿಸುವುದರ ಮೇಲೂ ನಿಗಾ ಇಡಲಾಗಿದೆ. ದಾಖಲೆ ಇಲ್ಲದೇ ಹಣಸಾಗಾಟ, ಬ್ಯಾಂಕ್ ವಹಿವಾಟುಗಳ ಬಗ್ಗೆ ಪರಿಶೀಲನೆ ನಡೆಸಿ ಈ ಬಾರಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಮಾಹಿತಿ ನೀಡಿದ್ದಾರೆ.