ಮಂಡ್ಯ: ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆಯ ಯೋಜನೆಯಲ್ಲಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಕಾರ್ಯಕ್ರಮದಡಿ ಮಂಡ್ಯದ ಬೆಲ್ಲಕ್ಕೆ ಮಾನ್ಯತೆ ನೀಡಲಾಗಿದ್ದು, ಇದರಿಂದ ಕಬ್ಬು ಬೆಳೆಗಾರರು ಸಹ ಸಂತಸಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ (ಆರ್ಗ್ಯಾನಿಕ್ ) ಕೆಮಿಕಲ್ ಫ್ರೀ ಬೆಲ್ಲವನ್ನು ತಯಾರು ಮಾಡುವ ಘಟಕವನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್. ವಿ. ಸುರೇಶ್ ವಿ. ಸಿ ಫಾರಂನಲ್ಲಿ ಉದ್ಘಾಟಿಸಿದ್ದಾರೆ. ಈ ಘಟಕ ಉತ್ತಮವಾದ ಕೆಲಸ ನಿರ್ವಹಿಸಿ ರೈತ ಸಮುದಾಯಕ್ಕೆ ಕಬ್ಬು ಬೆಳೆಗಾರರಿಗೆ ವರದಾನವಾಗಲಿ ಎಂದು ಹಾರೈಸಿದರು.
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ವಲಯ ಕೃಷಿ ಸಂಶೋಧನ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾನಿಲಯ, ವಿ. ಸಿ ಫಾರಂ, ಮಂಡ್ಯ ತಾಲೂಕು ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಶ್ರಯದಲ್ಲಿ ನಡೆದ ಕೃಷಿ ಯಂತ್ರೋಪಕರಣಗಳ ಮೇಳ 2023 ಹಾಗೂ ಜಾಗರಿ ಪಾರ್ಕ್ನ ಇನ್ಕ್ಯುಬೇಷನ್ ಕೇಂದ್ರದ ಪ್ರಾರಂಭೋತ್ಸವ ನಡೆಯಿತು.
ಖಾಸಗಿಯವರ ಸಹಭಾಗಿತ್ವದಲ್ಲಿ ರಾಸಾಯನಿಕ ಮುಕ್ತ ಬೆಲ್ಲದ ಉತ್ಪಾದನೆ ಮಾಡಲಾಗುವುದು. ಇದಕ್ಕಾಗಿ ಸುತ್ತಮುತ್ತಲಿನ ರೈತರು ಮತ್ತು ವಿ. ಸಿ ಫಾರಂ ಅವರು ಉತ್ತಮ ಗುಣಮಟ್ಟದ ಕಬ್ಬು ಉತ್ಪನ್ನ ಮಾಡಿ ನೀಡಬೇಕು. ರಾಸಾಯನಿಕ ಮುಕ್ತ ಬೆಲ್ಲವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದು ಕೃಷಿ ವಿಶ್ವವಿದ್ಯಾನಿಲಯದ ಅಭಿಲಾಷೆಯಾಗಿದೆ.