ಬೆಂಗಳೂರು: ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಲ್ಲ, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸಲಾಗಿಲ್ಲ.
ಇದಕ್ಕೆ ಯಾರು ಹೊಣೆಗಾರರು ಎಂದು ಆತ್ಮಾವಲೋಕನ ಮಾಡಿಕೊಳ್ಳೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಕಾಂಗ್ರೆಸ್ಗೆ ಟಾಂಗ್ ನೀಡಿದರು. ನಾವು ಕಂಡಂತೆ ಮೀಸಲಾತಿಯ ಲಾಭ ಕೆಲವೇ ಕೆಲವು ಜನರಿಗೆ ಸಿಕ್ಕಿದೆ. ದೊರೆತಿರುವವರಿಗೇ ಸೌಲಭ್ಯಗಳು ದೊರೆಯುತ್ತಿದ್ದು, ಅವರಿಗೆ ಸಂವಿಧಾನದ ಈ ಹಕ್ಕನ್ನು ಹೇಗೆ ಪಡೆಯಬೇಕು ಎಂಬುದು ಕರಗತವಾಗಿದೆ. ಹಳ್ಳಿಯ ಜನರಿಗೆ, ಬಡವರಿಗೆ ಈ ಮೀಸಲಾತಿ ಕುರಿತು ಸ್ವಲ್ಪವೂ ಅರಿವಿಲ್ಲ. ನಮ್ಮ ಹಕ್ಕು ನಮಗೆ ತಿಳಿಯದಿದ್ದರೆ ಅದನ್ನು ಪಡೆಯುವುದು ಕಷ್ಟವಾಗುತ್ತದೆ ಎಂದರು.