ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಮೀಸಲಾತಿ ನೀಡಲು ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ ಎಂದು ಜೆಡಿಎಸ್ ಆಕ್ರೋಶ ಹೊರ ಹಾಕಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಉತ್ತರದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ವಂಚನೆ ನಮ್ಮ ಮೂಗಿನ ಕೆಳಕ್ಕೆ ನಡೆಯುತ್ತಿದೆ. ಉತ್ತರದವರ ಮುಂದೆ ಬೇಡಲು ನಾವೇನು ಅವರ ಗುಲಾಮರೆ? ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ ಹೊರತು ಭಿಕ್ಷೆಯಲ್ಲ’ ಎಂದು ಎಚ್ಚರಿಕೆ ನೀಡಿದೆ.
ಡಬಲ್ ಎಂಜಿನ್ ಸರಕಾರ ಬಂದರೆ ರಾಜ್ಯಕ್ಕೆ ಲಾಭವಾಗಲಿದೆ ಎಂದು ಬಿಜೆಪಿ ಮುಖಂಡರು ಬೊಬ್ಬೆ ಹಾಕುತ್ತಿದ್ದರು. ಆದರೆ, ಈಗ ನಮ್ಮ ಮಕ್ಕಳಿಗೆ ಮೋಸವಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೆ, ಈ ಅನ್ಯಾಯವನ್ನು ಮೋದಿ ಅವರ ಗಮನಕ್ಕೆ ತನ್ನಿ. ನಡುಬಗ್ಗಿಸಿ ಇನ್ನೆಷ್ಟು ದಿನ ನಿಲ್ಲುವಿರಿ? ಅಧಿಕಾರದ ಕೊನೆಯಲ್ಲಾದರೂ ಸ್ವಾಭಿಮಾನಿಯಾಗಿ ಧ್ವನಿ ಎತ್ತಿ’ ಎಂದು ಜೆಡಿಎಸ್ ಲೇವಡಿ ಮಾಡಿದೆ.