ಬೆಂಗಳೂರು: ಇತ್ತೀಚೆಗೆ, ಬಿಟಿಎಂ ಲೇಔಟ್ ನ ಬಿಜೆಪಿ ಘಟಕದಲ್ಲಿ ಗುರುತಿಸಿಕೊಂಡಿರುವ ಅನಿಲ್ ಶೆಟ್ಟಿ ಎಂಬುವರು ಟ್ವೀಟ್ ಮಾಡಿ, ನನ್ನ ಸೇವೆಯನ್ನು ಪರಿಗಣಿಸಿಯೂ ಪಕ್ಷ ನನಗೆ ಟಿಕೆಟ್ ಕೊಟ್ಟಿಲ್ಲ. ಆದರೂ, ನಾನು ಪಕ್ಷವನ್ನು ಬಿಡುವುದಿಲ್ಲ. ನಾನು ನನ್ನ ಪಕ್ಷಕ್ಕೆ ನಿಷ್ಠನಾಗಿರುತ್ತೇನೆ ಎಂದು ಹೇಳಿದ್ದರು. ಆ ಟ್ವೀಟ್ ಗೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ, ಇಂಥ ವ್ಯಕ್ತಿಗಳು ಸಮಾಜ ಸೇವೆ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ಬಿಜೆಪಿ ಹಾಗೂ ಆರ್ ಎಸ್ ಎಸ್ ಗಣ್ಯರನ್ನು ಆಗ್ರಹಿಸಿದ್ದಾರೆ.
ನಮ್ಮ ಇಂದಿನ ಭಾರತದ ರಾಜಕೀಯದಲ್ಲಿ, ಅನಿಲ್ ಶೆಟ್ಟಿಯವರಂಥ ಯುವ ನಾಯಕರು ಬೇಕು. ಪ್ರಜಾ ಸೇವೆಯೊಂದಕ್ಕೇ ತಮ್ಮನ್ನು ತಾವು ಮುಡಿಪಾಗಿಡುವಂಥ ಯುವ ನಾಯಕರ ಅವಶ್ಯಕತೆ ನಮ್ಮ ದೇಶಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರ್ ಎಸ್ ಎಸ್ ನ ಸಹ ಸರಕಾರ್ಯವಾಹ ಮುಂಕುಂದ ಸಿ.ಆರ್ ಹಾಗೂ ಆರ್ ಎಸ್ ಎಸ್ ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಟ್ವೀಟರ್ ಹ್ಯಾಂಡಲ್ ಬಾರ್ ಗಳನ್ನು ಹಾಕಿ, ಅನಿಲ್ ಶೆಟ್ಟಿಯವರ ಟ್ವೀಟ್ ಅನ್ನು ಅವರ ಗಮನಕ್ಕೂ ತಂದಿದ್ದಾರೆ.
ಅನಿಲ್ ಟ್ವೀಟ್ ಪ್ರಾಮುಖ್ಯತೆ ಏನು?
ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಟಿಕೆಟ್ ಘೋಷಿಸಿರುವ ಪ್ರಮುಖ ಪಕ್ಷಗಳ ಮುಖಂಡರುಗಳಿಗೆ ಬಂಡಾಯ ಬಿಸಿ ತಟ್ಟಿದೆ. ಅನೇಕ ಟಿಕೆಟ್ ವಂಚಿತರು, ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೆ ಕೆಲವರು ಗಪ್ ಚುಪ್ ಆಗಿ ಅನ್ಯ ಪಕ್ಷಗಳ ಕಡೆಗೆ ಮುಖ ಮಾಡಿದ್ದಾರೆ. ಆದರೆ, ಇವರೆಲ್ಲರಿಗೆ ತಿಳುವಳಿಕೆ ಹೇಳುವ ನಿಟ್ಟಿನಲ್ಲಿ ಅನಿಲ್ ಶೆಟ್ಟಿಯವರ ಟ್ವೀಟ್ ಮೂಡಿಬಂದಿತ್ತು. ಅದು ನೊಂದ ಮನಗಳಿಗೆ ಸ್ಫೂರ್ತಿ ತುಂಬಿ, ಅವರಲ್ಲಿನ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸಿ, ಪಕ್ಷ ನಿಷ್ಠೆಯನ್ನು ಉದ್ದೀಪನಗೊಳಿಸುವಂಥ ಆದರ್ಶಮಯ ಟ್ವೀಟ್ ಅದಾಗಿತ್ತು. ಆ ನಿಟ್ಟಿನಲ್ಲಿ ಅದು ಎಲ್ಲರ ಮೆಚ್ಚುಗೆ ಗಳಿಸಿದೆ.