ಪರಭಾಷೆಯ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿನವರು ಅಲ್ಲಿ ಮಿಂಚುತ್ತಿರೋದು ಅಲ್ಲಿನ ಸಾಕಷ್ಟು ಮಂದಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಇದೀಗ ಈ ಬಗ್ಗೆ ತೆಲುಗು ನಟಿ ಚರಿಷ್ಮಾ ಆಕ್ರೋಶ ಹೊರ ಹಾಕಿದ್ದಾರೆ.
ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದಲ್ಲಿಯೂ ಸಕ್ರಿಯವಾಗಿರುವ ಚರಿಷ್ಮಾ ನಾಯ್ಡು ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. “ತೆಲುಗು ಕಿರುತೆರೆಯಲ್ಲಿ ಕನ್ನಡ ಕಲಾವಿದರು ಹೆಚ್ಚಾಗಿ ಇದ್ದಾರೆ. ಬೆಂಗಳೂರಿನಿಂದ ಹೈದರಾಬಾದ್ಗೆ ವಿಮಾನದಲ್ಲಿ ಕಲಾವಿದರು ಬರುತ್ತಾರೆ. ಇದರ ಭತ್ಯೆಯನ್ನು ತೆಲುಗು ನಿರ್ಮಾಪಕರೇ ವಹಿಸುತ್ತಾರೆ. ಕನ್ನಡಿಗರಿಗೆ ಒಳ್ಳೆಯ ಸಂಭಾವನೆ, ಊಟ-ವಿಮಾನದ ಭತ್ಯೆ, ಉಳಿಯಲು ವ್ಯವಸ್ಥೆಯನ್ನು ತೆಲುಗು ನಿರ್ಮಾಪಕರೇ ನೋಡಿಕೊಳ್ಳುತ್ತಾರೆ. ಆದರೆ ಹೈದಾರಾಬಾದ್ನಲ್ಲಿರುವ ಕಲಾವಿದರಿಗೆ ಧಾರಾವಾಹಿಯಲ್ಲಿ ಅವಕಾಶವೂ ಇಲ್ಲ, ಒಳ್ಳೆಯ ಸಂಭಾವನೆಯೂ ಇಲ್ಲ” ಎಂದು ಅಸಮಾಧಾನ ಹೊರ ಹಾಕಿದ್ದಾರೆ.
“ತೆಲುಗು ಕಿರುತೆರೆ ಈಗ ಕನ್ನಡ ಚಿತ್ರರಂಗವಾಗಿ ಮಾರ್ಪಟ್ಟಿದೆ. ಕನ್ನಡ ಕಲಾವಿದರನ್ನು ನಮ್ಮಲ್ಲಿ ಹಾಕಿಕೊಳ್ಳೋದು ತಪ್ಪಲ್ಲ, ಆದರೆ ಎಲ್ಲರೂ ಕನ್ನಡ ಕಲಾವಿದರೇ ಅಂದ್ರೆ ಹೇಗೆ? ಎಲ್ಲ ಪಾತ್ರಗಳಿಗೂ ಈಗ ಕನ್ನಡ ಕಲಾವಿದರೇ ಬೇಕು. ತೆಲುಗಿನ ಒಂದು ಧಾರಾವಾಹಿಯಲ್ಲಿ ಅಲ್ಲೋ, ಇಲ್ಲೋ ಮಾತ್ರ ತೆಲುಗಿನವರು ಕಾಣುತ್ತಾರೆ ಅಷ್ಟೇ, ಉಳಿದವರೆಲ್ಲರು ಕನ್ನಡಿಗರೇ” ಎಂದು ಚರಿಷ್ಮಾ ನಾಯ್ಡು ಹೇಳಿದ್ದಾರೆ.
“ತೆಲುಗಿನ ಕಲಾವಿದರಿಗೆ ಭಾಷೆ ಅರ್ಥ ಆಗುತ್ತದೆ, ಕನ್ನಡ ಕಲಾವಿದರು ಹೇಗೆ ಮಾತನಾಡಿದರೂ ಪರವಾಗಿಲ್ಲ, ಅದಕ್ಕೆ ಡಬ್ಬಿಂಗ್ ಮಾಡುತ್ತಾರೆ. ಲಿಪ್ ಸಿಂಕ್ ಸರಿಯಾಗಿ ಇಲ್ಲದಿದ್ರೂ ಕೂಡ ಕನ್ನಡದವರು ನಟಿಸಿದ್ರೆ ಚೆನ್ನಾಗಿದೆ ಅಂತ ಹೇಳ್ತಾರೆ. ಅದೇ ತೆಲುಗಿನವರು ಹೇಗೆ ನಟಿಸಿದ್ರೂ ಚೆನ್ನಾಗಿಲ್ಲ ಅಂತ ಹೇಳುತ್ತಾರೆ. ತೆಲುಗಿನಲ್ಲಿ ಕಲಾವಿದರಾಗಿ ನಾವಿರೋದು ತಪ್ಪೇ? ನಮ್ಮಲ್ಲಿ ಇರುವ ಎಷ್ಟೋ ಕಲಾವಿದರು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಅವರು ಯಾರಿಗೂ ಅವಕಾಶವೇ ನೀಡುತ್ತಿಲ್ಲ. ತೆಲುಗಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದ ಕಲಾವಿದರಿಗೆ ತೆಲುಗಿನಲ್ಲಿ ಅವಕಾಶ ಸಿಗುತ್ತದೆ. ತೆಲುಗಿನವರಾದ ನಾವು ಏನು ಮಾಡಬೇಕು? “ ಎಂದು ಚರಿಷ್ಮಾ ನಾಯ್ಡು ಅವರು ಪ್ರಶ್ನೆ ಮಾಡಿದ್ದಾರೆ.
“ಆಡಿಷನ್ ಮಾಡಿ, ಲುಕ್ ಟೆಕ್ಸ್ ಮಾಡಿ, ಅಮೌಂಟ್ ಬಗ್ಗೆಯೂ ಮಾತನಾಡಿ ಆಮೇಲೆ ಬೆಂಗಳೂರಿನ ಕಲಾವಿದರನ್ನು ಕರೆದುಕೊಂಡು ಬರುತ್ತಾರೆ. ತೆಲುಗಿನಲ್ಲಿ ತಾಂತ್ರಿಕ ವರ್ಗದವರಿಗೆಲ್ಲರಿಗೂ ಯೂನಿಯನ್ ಇದೆ. ಆದರೆ ಕಲಾವಿದರಿಗೆ ಮಾತ್ರ ಇಲ್ಲ” ಎಂದು ಚರಿಷ್ಮಾ ನಾಯ್ಡು ಅವರು ಬೇಸರ ಹೊರಹಾಕಿದ್ದಾರೆ.