ಮಾನವ ಹಕ್ಕುಗಳು ಎಂದರೆ ಮನುಷ್ಯ ಬದುಕಿಗಾಗಿ ಇರುವ, ಮನುಷ್ಯನ ಅಸ್ತಿತ್ವಕ್ಕಾಗಿ ಇರುವ ಹಕ್ಕುಗಳು. ಪ್ರತಿ ವರ್ಷ ಡಿಸೆಂಬರ್ 10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಹೊಸ ಹೊಸ ಥೀಮ್ ನೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಭೂಮಿಯ ಮೇಲೆ ಪ್ರತಿಯೊಂದು ಜೀವಿಗಳಿಗೂ ಬದಕುವ ಹಕ್ಕಿದೆ. ಸ್ವತಂತ್ರವಾಗಿ ತಮಗೆ ಬೇಕಾದ ಹಾಗೇ, ಬೇಕಾದ್ದನ್ನು ತಿನ್ನುವ, ವಾಸಿಸುವ, ಎಲ್ಲೆಂದರಲ್ಲಿ ಓಡಾಡುವ ಹಕ್ಕಿದೆ. ಇದನ್ನೇ ಮಾನವ ಹಕ್ಕುಗಳು ಎಂದು ಕರೆಯಲಾಗುತ್ತದೆ.
ಭೂಮಿಯ ಮೇಲಿರುವ ಪ್ರತಿಯೊಬ್ಬ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆಹಾರ, ಉಡುಪು ಮತ್ತು ವಸತಿ. ಇವು ಮನುಷ್ಯನ ಮೂಲಭೂತ ಹಕ್ಕುಗಳು. ಇವುಗಳಿಲ್ಲದೆ ಮನುಷ್ಯನ ಜೀವನ ಎಂದಿಗೂ ಕಷ್ಟವೇ. ಈ ಮೂಲಭೂತ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ.
ಆದರೆ ಬಹುತೇಕ ಸಂದಂರ್ಭಗಳಲ್ಲಿ ಮನುಷ್ಯನ ಈ ಮೂಲಭೂತ ಹಕ್ಕುಗಳನ್ನು ಧಮನಿಸುವ ಪ್ರಯತ್ನಗಳೇ ನಡೆಯುತ್ತಿವೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇತರರ ಬದುಕಿನ ಹಕ್ಕನ್ನು ಕಸಿಯುವುದು, ಅವರಿಗೆ ಹಿಂಸೆ ನೀಡುವುದು ಇತ್ಯಾದಿ ಇದರ ವ್ಯಾಪ್ತಿಯೊಳಗೆ ಬರುತ್ತವೆ. ಪ್ರತಿಯೊಬ್ಬ ಮನುಷ್ಯನ ಈ ಹಕ್ಕುಗಳು ಸಂರಕ್ಷಿಸಲ್ಪಡಬೇಕು, ಅವರನ್ನು ಯಾರು ಧಮನಿಸಬಾರದು, ಮನುಷ್ಯನಿಗೆ ಕನಿಷ್ಠ ಅಗತ್ಯತೆಗಳು ಸಿಗಬೇಕು, ಅವರ ಹಕ್ಕುಗಳಿಗೆ ಗೌರವ ಸಿಗಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ.
ಮಾನವ ಹಕ್ಕುಗಳ ದಿನ ಹಿನ್ನಲೆ
ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948 ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತು. ಅಂದಿನಿಂದ ಡಿಸೆಂಬರ್ 10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ. 1950 ರ ಡಿಸೆಂಬರ್ 10 ರಂದು ಪ್ಯಾರಿಸ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾನವ ಹಕ್ಕುಗಳ ಬಗ್ಗೆ ಉಲ್ಲೇಖಿಸಲಾಯಿತು.
ಮಾನವ ಹಕ್ಕುಗಳ ಉದ್ದೇಶ
ಯಾವುದೇ ಧರ್ಮ, ಜಾತಿ, ಲಿಂಗ, ಜನಾಂಗ, ಬಣ್ಣ, ಭಾಷೆ, ರಾಜಕೀಯ ಅಥವಾ ಇತರೆ ಅಭಿಪ್ರಾಯಗಳು, ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಮಾನವರು ಸಮಾನರು. ಎಲ್ಲರೂ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುವುದು ಮಾನವ ಹಕ್ಕುಗಳ ಮೂಲ ಉದ್ದೇಶವಾಗಿದೆ.
ಮಾನವ ಹಕ್ಕುಗಳು ಯಾವುವು?
ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ರಕ್ಷಣೆ ಮಾಡಲು ಮಾನವ ಹಕ್ಕುಗಳ ದಿನವನ್ನು ಘೋಷಿಸಲಾಯಿತು. ಈ ದಿನದಂದು ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಜೀವಿಸುವುದು, ವಾಕ್ ಸ್ವಾತಂತ್ರ್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಧಾರ್ಮಿಕ ಸ್ವಾತಂತ್ರ್ಯದ ಜತೆಗೆ ದೌರ್ಜನ್ಯದ ವಿರುದ್ಧ ಧ್ವನಿ ಎತ್ತು ಹಕ್ಕುಗಳು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ.