ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಮತದಾನ ನಿನ್ನೆ(ಮೇ.10) ಭರ್ಜರಿಯಾಗಿ ನಡೆದಿದ್ದು, ಇವಿಎಂನಲ್ಲಿ 2,615 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಮೇ.13 ರಂದು ಬೆಳಗ್ಗೆ 8 ಗಂಟೆಯಿಂದ ಮತ ಏಣಿಕೆ ನಡೆಯಲಿದ್ದು, ಈಗಾಗಲೇ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಅದರಂತೆ ಬೆಂಗಳೂರಿನ 28 ಕ್ಷೇತ್ರಗಳಿಗೆ ನಾಲ್ಕು ಕಡೆ ಸ್ಟ್ರಾಂಗ್ ರೂಮ್ಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ. ಬೆಂಗಳೂರಿನ ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು, ಬಸವನಗುಡಿ ಬಿಎಂಎಸ್ ಕಾಲೇಜು, ಜಯನಗರದ SSMRV ಕಾಲೇಜು, ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಕಾಲೇಜು ಕೊಠಡಿಯನ್ನು ಸಂಪೂರ್ಣವಾಗಿ ಅಧಿಕಾರಿಗಳು ಸೀಲ್ ಮಾಡಿದ್ದಾರೆ.
ಸ್ಥಳೀಯ ಪೊಲೀಸರು ಹಾಗೂ ಬಿಎಸ್ಎಫ್ ಸಿಬ್ಬಂದಿಯಿಂದ ಭದ್ರತೆ ಮಾಡಲಾಗಿದ್ದು, ಒಂದೊಂದು ಸ್ಟ್ರಾಂಗ್ ರೂಮ್ ಬಳಿ 100ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಒಬ್ಬ ಡಿಸಿಪಿ, 5 ಎಸಿಪಿ, 10 ಇನ್ಸ್ಪೆಕ್ಟರ್ಸ್ 100 ಪೊಲೀಸರು ಸೇರಿ ಸ್ಟ್ರಾಂಗ್ ರೂಂ ಸಮೀಪ ಕೆಎಸ್ಆರ್ಪಿ ತುಕಡಿ ಸಹ ನಿಯೋಜನೆ ಮಾಡಲಾಗಿದೆ.