ನವದೆಹಲಿ: ಲಿವ್ ಇನ್ ಗೆಳತಿ (Live-In Partner) ಶ್ರದ್ಧಾ ವಾಕರ್ನನ್ನು ಹತ್ಯೆ ಮಾಡಿದ್ದ ಅಫ್ತಾಬ್ ಬಾಣಸಿಗನಾಗಿದ್ದು, ಮಾಂಸವನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ತರಬೇತಿ ಪಡೆದಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯಲ್ಲಿ (Delhi) ಶ್ರದ್ಧಾ ವಾಕರ್ (Shraddha Walkar) ಹತ್ಯೆಗೆ ಸಂಬಂಧಿಸಿ ಆರೋಪಿ ಅಫ್ತಾಬ್ ಪೂನಾವಾಲಾನನ್ನು (Aaftab Poonawala) ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಕೆಲವು ವಿಷಯಗಳನ್ನು ಬಾಯ್ಬಿಟ್ಟಿದ್ದು, ಈ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಫ್ತಾಬ್ ತಾಜ್ ಹೋಟೆಲ್ನಲ್ಲಿ ತರಬೇತಿ ಪಡೆಯುತ್ತಿದ್ದು, ಮಾಂಸವನ್ನು ಹೇಗೆ ರಕ್ಷಿಸಬೇಕು ಎನ್ನುವುದನ್ನು ತಿಳಿದಿದ್ದ. ಅಷ್ಟೇ ಅಲ್ಲದೇ ಅಫ್ತಾಬ್ ತನ್ನ ಗೆಳತಿ ಶ್ರದ್ಧಾಳನ್ನು ಕೊಂದ ನಂತರ ನೆಲವನ್ನು ಸ್ವಚ್ಛಗೊಳಿಸಲು ಡ್ರೈ ಐಸ್, ಅಗರ ಬತ್ತಿ ಹಾಗೂ ರಾಸಾಯನಿಕಗಳನ್ನು ಬಳಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಫ್ತಾಬ್ ತನ್ನ ಗೆಳತಿ ಶ್ರದ್ಧಾ ವಾಲ್ಕರ್ ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ. ನಂತರ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು 3 ವಾರಗಳ ಕಾಲ 300 ಲೀ. ಫ್ರಿಡ್ಜ್ನಲ್ಲಿ ಇರಿಸಿದ್ದ ಎಂಬ ಆರೋಪ ಕೇಳಿಬಂದಿತ್ತು ಶ್ರದ್ಧಾಳನ್ನು ಕೊಂದ ವಾರದೊಳಗೆ ಅಫ್ತಾಬ್ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ತನ್ನ ಹೊಸ ಗೆಳತಿಗೆ ಶ್ರದ್ಧಾಳ ಉಂಗುರವನ್ನೇ ನೀಡಿದ್ದನೆಂದು ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದ್ದಾರೆ.