ಸಿನಿಮಾ ಶೂಟಿಂಗ್ ವೇಳೆ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಅವಘಡಗಳು ಸಂಭವಿಸುತ್ತಲೆ ಇರುತ್ತದೆ. ಇದೀಗ ಹಿಂದಿ ಧಾರಾವಾಹಿ ‘ಗಮ್ ಹೈ ಕಿಸೀಕೆ ಪ್ಯಾರ್ ಮೈ’ ಧಾರಾವಾಹಿ ಸೆಟ್ನಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದೆ. ಇದರಿಂದ ಇಡೀ ಧಾರಾವಾಹಿ ಸೆಟ್ ಬೆಂಕಿಗೆ ಆಹುತಿ ಆಗಿದೆ.
ಮುಂಬೈನ ಫಿಲ್ಮ್ ಸಿಟಿಯಲ್ಲಿ ಸೆಟ್ ಹಾಕಲಾಗಿದ್ದು ಇದೀಗ ಅವಘಡ ಸಂಭವಿಸಿದೆ. ಮಾರ್ಚ್ 10ರಂದು ಸಂಜೆ ನಾಲ್ಕು ಗಂಟೆ ವೇಳೆಗೆ ಅಗ್ನಿಅವಘಡ ಸಂಭವಿಸಿದ್ದು, ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿದ ವರದಿ ಆಗಿದೆ.
ಸೆಟ್ನಲ್ಲಿ ಸಿಲಿಂಡರ್ ಇದ್ದು, ಅದು ಸ್ಫೋಟಗೊಂಡಿದೆ. ಇದರಿಂದ ಕ್ಷಣಮಾತ್ರದಲ್ಲಿ ಬೆಂಕಿ ಎಲ್ಲಾ ಕಡೆಗಳಲ್ಲಿ ಆವರಿಸಿದೆ. ಸೆಟ್ ಬಹುತೇಕ ಸುಟ್ಟು ಕರಕಲಾಗಿದ್ದು, ಸೆಟ್ನಲ್ಲಿ ಬೆಂಕಿ ನಂದಿಸಲು ಯಾವುದೇ ವಸ್ತುಗಳು ಇರಲಿಲ್ಲ. ಇದು ಬೆಂಕಿ ವೇಗವಾಗಿ ಹಬ್ಬಲು ಕಾರಣವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಫಿಲ್ಮ್ ಸಿಟಿ ನಿರ್ದೇಶಕರ ವಿರುದ್ಧವೂ ಕೇಸ್ ದಾಖಲಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಸಿಲಿಂಡರ್ ಸ್ಫೋಟಗೊಳ್ಳುವ ಸಂದರ್ಭದಲ್ಲಿ ಮಕ್ಕಳ ದೃಶ್ಯವೊಂದನ್ನು ಶೂಟ್ ಮಾಡಲಾಗುತ್ತಿತ್ತು. ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಅವರನ್ನು ಸ್ಥಳಾಂತರ ಮಾಡಲಾಗಿದೆ. ಧಾರಾವಾಹಿಯ ಕೆಲ ವಸ್ತುಗಳು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.
‘ಗಮ್ ಹೈ ಕಿಸೀಕೆ ಪ್ಯಾರ್ ಮೈ’ ಧಾರಾವಾಹಿ ಸೆಟ್ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅಕ್ಕಪಕ್ಕದ ಸೆಟ್ಗೂ ಹಾನಿ ಆಗಿದೆ. ಶೂನ್ಯ ಸ್ಕ್ವೇರ್ ಪ್ರೊಡಕ್ಷನ್ಸ್ ಕಡೆಯಿಂದ ಸೆಟ್ ಒಂದು ನಿರ್ಮಾಣ ಆಗುತ್ತಿತ್ತು. ಬೆಂಕಿ ಬಿದ್ದ ಧಾರಾವಾಹಿ ಸೆಟ್ನ ಪಕ್ಕದಲ್ಲೇ ಅದೂ ಇತ್ತು. ಅದಕ್ಕೂ ಬೆಂಕಿ ತಗುಲಿದೆ. ಬೆಂಕಿ ಹರಡುವ ಭಯದಿಂದ ಈ ಸೆಟ್ನ ಸಮೀಪದಲ್ಲಿದ್ದ ಎರಡು ಸೆಟ್ನಿಂದ ಜನರನ್ನು ಸ್ಥಳಾಂತರ ಮಾಡಲಾಗಿತ್ತು.