ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ತೆರೆ ಬೀಳುತ್ತಿದ್ದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳ ಭರಾಟೆ ಶುರುವಾಗಿದೆ. ರಾಷ್ಟ್ರೀಯ, ಸ್ಥಳೀಯ ಏಜೆನ್ಸಿಗಳಿಂದ ಥರಹೇವಾರಿ ಸಮೀಕ್ಷೆಗಳು ಹೊರಬಿದ್ದಿವೆ. ಆದರೆ, ಈ ಸಮೀಕ್ಷೆಗಳೇ ಅಂತಿಮ ನಿಲ್ದಾಣವಲ್ಲ!
ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಮತದಾನೋತ್ತರ ಸಮೀಕ್ಷೆಗಳು ನಿಖರ ಎಂಬ ಮಾತಿದೆ. ಏಕೆಂದರೆ, ಮತಗಟ್ಟೆಗಳಲ್ಲಿ ಕೈಗೊಳ್ಳಲಾಗುವ ಈ ಸರ್ವೆಗಳಲ್ಲಿ ಒಂದು ಹೊಳಹು ಸಿಗುತ್ತದೆ. ಮತ ಚಲಾಯಿಸಿದವರ ಮನಸ್ಥಿತಿ ಮತ್ತು ಅವರೊಂದಿಗೆ ನಡೆಸಿದ ಮಾತುಕತೆ ಆಧರಿಸಿ ಒಂದು ನಿರ್ಣಯಕ್ಕೆ ಬರುವ ಈ ಸಮೀಕ್ಷೆಗಳು ವಾಸ್ತವದ ಹತ್ತಿರ ಬಂದಿರುವ ನಿದರ್ಶನಗಳಿವೆ.
ಮತದಾನೋತ್ತರ ಸಮೀಕ್ಷೆಗಳ ಲೆಕ್ಕಾಚಾರ ತಲೆ ಕೆಳಗಾದ ಉದಾಹರಣೆಗಳೂ ಇವೆ. ಏಕೆಂದರೆ ಪ್ರತಿ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳಿಂದಲೂ ಅಭಿಪ್ರಾಯ ಸಂಗ್ರಹಿಸುವುದಿಲ್ಲ. ಹೀಗಾಗಿ ಈ ಸಮೀಕ್ಷೆಗಳ ವಿಚಾರದಲ್ಲಿಇದಮಿತ್ಥಂ ಎಂದು ಹೇಳಲು ಸಾಧ್ಯವೇ ಇಲ್ಲ.
2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಹುತೇಕ ಸಮೀಕ್ಷಾ ಸಂಸ್ಥೆಗಳಿಗೆ ಮುಖಭಂಗವಾಗಿತ್ತು. ಆವತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವರ್ಚಸ್ಸು ಮತ್ತು ಅವರ ಪರವಾದ ಅಲೆಯನ್ನು ಗ್ರಹಿಸುವಲ್ಲಿ ಸಮೀಕ್ಷಾಕಾರರು ವಿಫಲರಾಗಿದ್ದರು. ಯಾವ ಸಮೀಕ್ಷೆಯಲ್ಲೂ ಬಿಜೆಪಿಗೆ ಮ್ಯಾಜಿಕ್ ನಂಬರ್ ಬರುವ ಬಗ್ಗೆ ಉಲ್ಲೇಖಿಸಿರಲಿಲ್ಲ. ದೇಶದ ಪ್ರಸಿದ್ಧ ಮತ್ತು ರಾಜಕೀಯ ಪಂಡಿತೋತ್ತಮರು ಎಂದು ಬಿಂಬಿಸಿಕೊಳ್ಳುವ ವಿಶ್ಲೇಷಣಾಕಾರರು ಕೂಡ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ರಚನೆಯಾಗುವ ಬಗ್ಗೆ ಭವಿಷ್ಯ ನುಡಿಯಲು ಮನಸ್ಸು ಮಾಡಿರಲಿಲ್ಲ. ಆದರೆ, ಚುನಾವಣಾ ಫಲಿತಾಂಶ ಬಂದಾಗ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸರಳ ಬಹುಮತದ ಗಡಿ ದಾಟಿದ ದಾಖಲೆಯನ್ನು ಬಿಜೆಪಿ ಬರೆದಿತ್ತು.
004ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಮುಖವಾಗಿ ಕಣದಲ್ಲಿದ್ದವು. ಆದರೆ, ರಾಷ್ಟ್ರೀಯ ಮಾಧ್ಯಮಗಳ ಸಮೀಕ್ಷೆಗಳಲ್ಲಿ ಜಾತ್ಯತೀತ ಜನತಾದಳವನ್ನು ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ. ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲಿದೆ ಎಂದೇ ಸಮೀಕ್ಷೆಗಳೆಲ್ಲ ಗಿರಕಿ ಹೊಡೆದಿದ್ದವು. ಫಲಿತಾಂಶ ಪ್ರಕಟವಾದಾಗ 58 ಸ್ಥಾನಗಳೊಂದಿಗೆ ಕಿಂಗ್ ಮೇಕರ್ ಆಗಿ ಜೆಡಿಎಸ್ ಹೊರ ಹೊಮ್ಮಿತ್ತು.
ಸದ್ಯದ ಪರಿಸ್ಥಿತಿಯಲ್ಲಿ ಸಮೀಕ್ಷೆಗಳೇ ನಿರ್ಣಾಯಕವೆಂದು ಹೇಳುವಂತಿಲ್ಲ. ಯಾಕೆಂದರೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ನಡೆದ ಸಾಧ್ಯತೆಯೇ ಹೆಚ್ಚಿರುತ್ತದೆ. ಕೆಲ ಸಮೀಕ್ಷೆಗಳಲ್ಲಿ ಹೇಳಿದಂತೆ, ಜೆಡಿಎಸ್ ಅಷ್ಟೊಂದು ಕಳಪೆ ಪ್ರದರ್ಶನ ತೋರುತ್ತದೆ ಎಂಬ ನಿರ್ಧಾರಕ್ಕೆ ಬರುವಂತಿಲ್ಲ. ಅದೇನೇ ಇದ್ದರೂ ಇನ್ನು ಎರಡನೇ ದಿನದಲ್ಲಿಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ.