ಮಂಡ್ಯ :- ಎಲೆಕ್ಟ್ರಿಕಲ್ ದ್ವಿಚಕ್ರ ವಾಹನವನ್ನು ಚಾರ್ಜಿಂಗ್ ಹಾಕಿದ್ದ ವೇಳೆ ಸ್ಪೋಟಗೊಂಡು ಒರ್ವ ಬಾಲಕ, ಮೂವರು ಮಹಿಳೆಯರು ಸೇರಿದಂತೆ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಈ ಗ್ರಾಮದ ಮುತ್ತುರಾಜ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳಾದ ಟಿವಿ, ಫ್ರಿಡ್ಜ್ ಹಾಗೂ ದವಸ ಧಾನ್ಯ ಸೇರಿದಂತೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಮುತ್ತುರಾಜ್ ಮದ್ದೂರಿನ ಪ್ರವಾಸಿ ಮಂದಿರದ ಬಳಿ ಇರುವ E -ROUTE ಕಂಪನಿಯಲ್ಲಿಎಲೆಕ್ಟ್ರಿಕಲ್ ಬೈಕ್ ಅನ್ನು 7 ತಿಂಗಳ ಹಿಂದೆ ಖರೀದಿ ಮಾಡಿದ್ದರು.ಎಂದಿನಂತೆ ತಮ್ಮ ಮನೆಯ ಒಳಗೆ ನಿಲ್ಲಿಸಿದ್ದ ಬೈಕ್ ಗೆ ಚಾರ್ಜಿಂಗ್ ಹಾಕಿದ್ದಾರೆ. ಕೆಲ ಹೊತ್ತಿನಲ್ಲೇ ಬೈಕ್ ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ. ಇದರಿಂದ ಮನೆತುಂಬಾ ಬೆಂಕಿ ಜ್ವಾಲೆ ಕಾಣಿಸಿಕೊಂಡು ಇಡೀ ಮನೆಗೆ ವ್ಯಾಪಿಸಿದೆ.
ಬೆಂಕಿ ವ್ಯಾಪಿಸಿದ ಪರಿಣಾಮ ಟಿವಿ, ಫ್ರಿಡ್ಜ್, ಡೈನಿಂಗ್ ಟೇಬಲ್, ಎರಡು ಮೊಬೈಲ್ ಎಲೆಕ್ಟ್ರಾನಿಕ್ ವೈರ್ ಗಳು ಹಾಗೂ ಮನೆಯಲ್ಲಿ ದಾಸ್ತಾನು ಮಾಡಿದ್ದ ದವಸ ಧಾನ್ಯ ಬೆಂಕಿಯಿಂದ ಭಸ್ಮವಾಗಿವೆ.
ಆತಂಕಗೊಂಡ ಮುತ್ತುರಾಜ್ ಮತ್ತು ಆತನ ಕುಟುಂಬದವರು ಮನೆಯಿಂದ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಕ ಪಕ್ಕದ ನಿವಾಸಿಗಳು ಧಾವಿಸಿ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಳಿದುಳಿದ ಪದಾರ್ಥಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.