ಬೆಂಗಳೂರು:– ನೆಲಮಂಗಲದವರೆಗೆ ಮೆಟ್ರೋ ಸಂರ್ಪಕ ವಿಸ್ತರಿಸುವ ಪ್ರಸ್ತಾವನೆಯನ್ನು ಪರಿಶೀಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನೆಲಮಂಗಲ ಪಟ್ಟಣಕ್ಕೆ ಕುಡಿಯುವ ನೀರಿನ ಬೇಡಿಕೆ ಇದೆ. ನೆಲಮಂಗಲ ಸುತ್ತಮುತ್ತಲ ಪ್ರದೇಶಗಳ ಕೆರೆಗಳನ್ನು ತುಂಬುವ ವೃಷಭಾವತಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಈ ಯೋಜನೆಯಿಂದ ನೀರಿನ ಅಂತರ್ಜಲ ಮಟ್ಟ ಹೆಚ್ಚಲಿದೆ.
ಮೆಟ್ರೋ ಸಂಪರ್ಕವನ್ನು ನೆಲಮಂಗಲದವರೆಗೂ ವಿಸ್ತರಿಸುವ ಯೋಜನೆ ಸರ್ಕಾರ ಪರಿಶೀಲಿಸಲಿದೆ. ನೆಲಮಂಗಲದ ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸಲು ಮುಂದಿನ ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಯಾಗಿ ಎಲ್ಲ ಧರ್ಮದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುವುದು ನಮ್ಮ ಗುರಿಯಾಗಿದೆ.
ಬಡವರಿಗೆ ಅಕ್ಕಿ, ಉಚಿತ ವಿದ್ಯುತ್, ಶಕ್ತಿ ಯೋಜನೆ,ಗೃಹಲಕ್ಷ್ಮಿ ಯೋಜನೆಗಳು ಯಾವುದೇ ಜಾತಿಧರ್ಮಕ್ಕೆ ಸೀಮಿತವಾಗಿಲ್ಲ. 1.14 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಜನರ ಕೈಗೆ ಬರುವ ದುಡ್ಡು, ಅವರ ಇತರೆ ಅವಶ್ಯಕತೆಗಳನ್ನು ಪೂರೈಸಿ, ಆರ್ಥಿಕತೆ ಹೆಚ್ಚುತ್ತದೆ. ಕೇವಲ ಶ್ರೀಮಂತರಲ್ಲದೇ, ಬಡವರು ಊಟಮಾಡುವಂತಾಗಬೇಕು, ಕರ್ನಾಟಕ ಹಸಿವುಮುಕ್ತ ರಾಜ್ಯವಾಗಬೇಕು.
1.30 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳಿಂದ ಲಾಭವಾಗಿದೆ. ಸಮಾಜ ನಿಂತ ನೀರಾಗದೆ ಬದಲಾವಣೆಯಾಗಬೇಕು ಎಂದರು.