ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಸ್ಸಿಮ್ ಅಲ್ ಥಾನಿ ಅವರನ್ನು ದೋಹಾದಲ್ಲಿ ಭೇಟಿ ಮಾಡಿದರು. ಈ ವೇಳೆ ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದರು ಎನ್ನಲಾಗಿದೆ.
ಒಂದು ದಿನದ ಭೇಟಿಗಾಗಿ ದೋಹಾಗೆ ಆಗಮಿಸಿದ ಜೈಶಂಕರ್ ಅವರು ಶೇಖ್ ಮೊಹಮ್ಮದ್ ಅವರೊಂದಿಗೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಜೈಶಂಕರ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು ಕತಾರ್ನ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಥಾನಿ ಅವರನ್ನು ದೋಹಾದಲ್ಲಿ ಭೇಟಿಯಾಗಲು ಸಂತೋಷವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭ ಹಾರೈಕೆಗಳನ್ನು ಅಮೀರ್ ಅವರಿಗೆ ತಿಳಿಸಿದರು ಎಂದು ಬರೆದುಕೊಂಡಿದ್ದಾರೆ.
“ನಾವು ರಾಜಕೀಯ, ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳ ಮೇಲೆ ಕೇಂದ್ರೀಕರಿಸುವ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದ್ದೇವೆ” ಎಂದು ಅವರು ಹೇಳಿದರು. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಗಾಜಾ ಪರಿಸ್ಥಿತಿ ಕುರಿತಂತೆ ಚರ್ಚೆ ನಡೆಸಿದರು.
ವಿದೇಶಾಂಗ ಸಚಿವರು, “ಭಾರತ-ಕತಾರ್ ಸಂಬಂಧಗಳನ್ನು ಮತ್ತಷ್ಟು ಸುಧಾರಿಸಲು ನಾವು ಎದುರು ನೋಡುತ್ತಿದ್ದೇವೆ ಮತ್ತು ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ಮಾತುಕತೆಯನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.
ಆಗಸ್ಟ್ 2022ರಲ್ಲಿ ಬಂಧನದ ನಂತರ ಮರಣದಂಡನೆಗೆ ಗುರಿಯಾದ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಕತಾರ್ ಬಿಡುಗಡೆ ಮಾಡಿದ ನಾಲ್ಕೂವರೆ ತಿಂಗಳ ನಂತರ ಜೈಶಂಕರ್ ಅವರು ಕತಾರ್ ಗೆ ಭೇಟಿ ನೀಡಿದರು.
ಶಿಷ್ಟಾಚಾರದ ಮುಖ್ಯಸ್ಥ ಇಬ್ರಾಹಿಂ ಫಕ್ರು ಅವರು ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಇದಕ್ಕೂ ಮುನ್ನ ಫೆಬ್ರವರಿ 14 ರಿಂದ 15 ರವರೆಗೆ ಕತಾರ್ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಚರ್ಚಿಸಿದ್ದರು.