ಬೆಂಗಳೂರು: IPS ಅಧಿಕಾರಿ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಆರೋಪಿ ಶ್ರೀನಿವಾಸ್ ನನ್ನು ಬೆಂಗಳೂರಿನ ತಲಘಟ್ಟಪುರ ಪೊಲೀಸರು ಅರೆಸ್ಟ್ ಮಾಡಿದರು. ಇದೀಗ ನಕಲಿ ಐಪಿಎಸ್ ಅಧಿಕಾರಿಯ ಅಸಲಿ ಕಥೆ ವಿಚಾರಣೆಯಲ್ಲಿ ಬಟಾ ಬಯಲಾಗಿದೆ. ಆರೋಪಿ, ಆರ್.ಶ್ರೀನಿವಾಸ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಅರ್ಧಕ್ಕೆ ನಿಲ್ಲಿಸಿದ್ದ.
ಐಷಾರಾಮಿ ಜೀವನಕ್ಕೆ ಇಳಿದು 2010ರಲ್ಲೇ 2 ಕಾರು ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಅಷ್ಟಲ್ಲದೇ ಬಿಸಿಎ ವ್ಯಾಸಂಗ ಮಾಡಿ ಖಾಸಗಿ ಶಾಲೆಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿದ್ದ. ಅದೇ ಶಾಲೆಯಲ್ಲಿ ಕೆಲಸ ಮಾಡ್ತಿದ್ದ ಯುವತಿಗೆ IPS ಅಧಿಕಾರಿ ಎಂದು ಹೇಳಿ ಪ್ರೀತಿಸಿ,
ಮದುವೆ ಆಗುವುದಾಗಿ ಹೇಳಿ ಮೋಸ ಮಾಡಿದ್ದ. ಅಷ್ಟೇ ಅಲ್ಲದೇ IPS ಪಾತ್ರಗಳನ್ನ ಅನುಕರಿಸಿ ಪೊಲೀಸ್ ಸಮವಸ್ತ್ರ ಧರಿಸಿ ವಂಚನೆಗೆ ಇಳಿದಿದ್ದ. IPS ಅಧಿಕಾರಿ ಎಂದು ನಕಲಿ ಐಡಿ ಕಾರ್ಡ್ ಸೃಷ್ಟಿಸಿಕೊಂಡಿದ್ದ. ತನ್ನ ಕಾರಿನ ಮೇಲೆ ಪೊಲೀಸ್ ವಾಹನದಲ್ಲಿ ಬಳಸುವ ಟಾಪ್ಲೈಟ್ ಅಳವಡಿಸಿಕೊಂಡಿದ್ದ. ಹಾಗೂ ಡಮ್ಮಿ ಪಿಸ್ತೂಲ್, ವಾಕಿಟಾಕಿಯನ್ನ ಇಟ್ಟುಕೊಂಡು ದೂರುದಾರರನ್ನ ನಂಬಿಸಿದ್ದ.
ಕೇಸ್ ಡಿಲ್ನಲ್ಲಿ ಬರುವ ಹಣವನ್ನ ಟ್ರಸ್ಟ್ಗಳನ್ನ ಓಪನ್ ಮಾಡಿಸಿ ಫಂಡ್ ಮಾಡಿಸುತ್ತೇನೆ ಹಾಗೂ ಲ್ಯಾಂಡ್ ಡೆವಲೆಪ್ಮೆಂಟ್ನಲ್ಲಿ ಇನ್ವೆಸ್ಟ್ ಮಾಡಿಸುತ್ತೇನೆ ಎಂದು ನಂಬಿದವರಿಗೆ ಟೋಪಿ ಹಾಕಿದ್ದ ಎಂಬುವುದು ಆರೋಪಿಯ ವಿಚಾರಣೆಯಲ್ಲಿ ತಿಳಿದು ಬಂದಿದೆ. ಸದ್ಯ ಆರೋಪಿಯಿಂದ 54 ಲಕ್ಷ ರೂ. ಮೌಲ್ಯದ ವಸ್ತುಗಳು ಮತ್ತು 36,20,000 ರೂ. ಹಣ ವಶಕ್ಕೆ ಪಡೆಯಲಾಗಿದ್ದು, ಆಪಲ್ ಕಂಪನಿಯ ಲ್ಯಾಪ್ಟಾಪ್, ಒಂದು ಡಮ್ಮಿ ಪಿಸ್ತೂಲ್, 4 ವಾಕಿಟಾಕಿಗಳು, ನಕಲಿ ಗುರುತಿನ ಕಾರ್ಡ್ ವಶಕ್ಕೆ ಪಡೆಯಲಾಗಿದೆ.