ಲಖನೌ: ಲಖನೌ ಸೂಪರ್ ಜಯಂಟ್ಸ್ ವಿರುದ್ಧ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ನಾವು ಮೊದಲು ಬ್ಯಾಟ್ ಮಾಡಿದ ನಿರ್ಧಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಆಯಿತು ಎಂದು ನಾಯಕ ಫಾಫ್ ಡು’ಪ್ಲೆಸಿಸ್ ತಿಳಿಸಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ, ನಾಯಕ ಫಾಫ್ ಡು’ಪ್ಲೆಸಿಸ್ (44 ರನ್) ಹಾಗೂ ವಿರಾಟ್ ಕೊಹ್ಲಿ (31 ರನ್) ಅವರ ಬ್ಯಾಟಿಂಗ್ ನೆರವಿನಿಂದ ತನ್ನ ಪಾಲಿನ 20 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 126 ರನ್ಗಳನ್ನು ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಲಖನೌ ಸೂಪರ್ ಜಯಂಟ್ಸ್ 108 ರನ್ಗಳಿಗೆ ಆಲ್ಔಟ್ ಆಯಿತು. ಆರ್ಸಿಬಿ ಪರ 44 ರನ್ ಗಳಿಸಿದ ಫಾಫ್ ಡು’ಪ್ಲೆಸಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಕಾರಣರಾದರು.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಫಾಫ್ ಡು’ಪ್ಲೆಸಿಸ್, “ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಇಲ್ಲಿನ ಪಿಚ್ ಸಂಪೂರ್ಣ ವಿರುದ್ಧವಾಗಿದೆ. ನಾವು ಪಂದ್ಯದ ಮೊದಲ 6 ಓವರ್ಗಳಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದೇವೆ. ಈ ಜೊತೆಯಾಟವೇ ಪಂದ್ಯದ ಫಲಿತಾಂಶ ಬದಲಿಸಿದೆ ಎಂಬುದು ನನ್ನ ಭಾವನೆ,” ಎಂದು ಹೇಳಿದರು.
“ಮೈದಾನಕ್ಕೆ ಬಂದಾಗ 135 ರನ್ ಗಳಿಸುವುದು ತುಂಬಾ ಕಠಿಣವಾಗಿತ್ತು. ದ್ವಿತೀಯ ಇನಿಂಗ್ಸ್ ಆರಂಭಕ್ಕೂ ಮುನ್ನ ಈ ಪಿಚ್ನ ಗುಣ ಗಮನಿಸಿದರೆ ಈ ಪಂದ್ಯದಲ್ಲಿ ನಾವು ಗೆಲ್ಲುವ ಅವಕಾಶಗಳಿವೆ ಎಂದು ಆಟಗಾರರಿಗೆ ಹೇಳಿದ್ದೆ. ಅದಕ್ಕೆ ತಕ್ಕಂತೆ ಬೌಲರ್ಗಳು ಬೌಲಿಂಗ್ ಪ್ರದರ್ಶನ ತೋರಿದ್ದಾರೆ,” ಎಂದು ಆರ್ಸಿಬಿ ನಾಯಕ ತಿಳಿಸಿದ್ದಾರೆ.
ಪಂದ್ಯದ ಗೆಲುವಿಗೆ ಕಾರಣವಾದ ಕರಣ್ ಶರ್ಮಾ ಹಾಗೂ ಜಾಶ್ ಹೇಝಲ್ವುಡ್ ಅವರನ್ನು ಶ್ಲಾಘಿಸಿದ ಫಾಫ್ ಡು’ಪ್ಲೆಸಿಸ್, “ಕರಣ್ ಶರ್ಮಾ ಅವರು ತುಂಬಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಇದಕ್ಕಾಗಿ ಅವರು ಸದಾ ಕಠಿಣ ಪರಿಶ್ರಮ ಪಡುತ್ತಾರೆ. ಆದರೆ, ಕಂಡೀಷನ್ಸ್ನಿಂದಾಗಿ ಅವರು ಕೆಲವೊಮ್ಮೆ ಆಡಲು ಸಾಧ್ಯವಾಗುತ್ತಿಲ್ಲ. ಇಂದು ಸಿಕ್ಕ ಅವಕಾಶದಲ್ಲಿ ಅವರು ಗಮನ ಸೆಳೆದಿದ್ದಾರೆ. ಜಾಶ್ ಹೇಝಲ್ವುಡ್ ಶಾಂತತೆ ಮತ್ತು ನಿಖರತೆಯೊಂದಿಗೆ ಬೌಲ್ ಮಾಡುತ್ತಾರೆ, ಅವರ ಸೇವೆ ತಂಡಕ್ಕೆ ಸಿಕ್ಕಿರುವುದು ಸಂತಸ ಮೂಡಿಸಿದೆ,” ಎಂದು ಹೇಳಿದ್ದಾರೆ.