ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪರಿಣಾಮಕಾರಿ ಆಗಬಲ್ಲ 4 ವಿಶ್ವ ದರ್ಜೆಯ ಬೌಲರ್ ಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಆಯ್ಕೆ ಮಾಡಿದ್ದಾರೆ.
ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 6 ವಿಕೆಟ್ ಪಡೆದಿದ್ದ ಮೊಹಮ್ಮದ್ ಸಿರಾಜ್ ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಕುಲ್ದೀಪ್ ಯಾದವ್ ರೊಂದಿಗೆ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆಯುವ ಬೌಲರ್ ಗಳ ರೂಪದಲ್ಲಿ ಅನುಭವಿ ಬೌಲರ್ ಗಳಾದ ನ್ಯೂಜಿಲೆಂಡ್ ನ ಟ್ರೆಂಟ್ ಬೌಲ್ಟ್ ಹಾಗೂ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡರನ್ನು ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಆಯ್ಕೆ ಮಾಡಿದ್ದು ಅದಕ್ಕೆ ಸೂಕ್ತ ಕಾರಣವನ್ನು ನೀಡಿದ್ದಾರೆ.
ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಬೌಲರ್ ಗಳು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ಹೇಳಲು ಸಂತಸ ಆಗುತ್ತದೆ. ಪ್ರತಿಯೊಂದು ತಂಡವು ವಿಶ್ವ ದರ್ಜೆಯ ಬೌಲಿಂಗ್ ಪಡೆ ಹೊಂದಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಎದುರಾಳಿಗಳ ಘಟಾನುಘಟಿ ಬ್ಯಾಟರ್ ಗಳ ಎದೆಯನ್ನು ನಡುಗಿಸುವಂತಹ ಬೌಲರ್ ಗಳು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದು, ಸಮತಟ್ಟಾದ ಮೈದಾನದಲ್ಲಿ ಬ್ಯಾಟರ್ ಗಳಿಗೆ ರನ್ ಗಳಿಸಲು ಸವಾಲಾತ್ಮಕ ಆಗಿರುತ್ತದೆ ಎಂದು ಡುಪ್ಲೆಸಿಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನನ್ನ ಪ್ರಕಾರ ಬಹುತೇಕ ಪಂದ್ಯಗಳಲ್ಲಿ ವಿಕೆಟ್ (ಪಿಚ್) ಪ್ರಮುಖ ಪಾತ್ರ ವಹಿಸುತ್ತದೆ. ಪಿಚ್ ವೇಗದ ಬೌಲರ್ ಗಳಿಗೆ ಸಹಕರಿಸುತ್ತಿದ್ದರೆ ಮೊಹಮ್ಮದ್ ಸಿರಾಜ್ ರಂತಹ ಬೌಲರ್ ಗಳು ಪರಿಣಾಮಕಾರಿ ಆಗುತ್ತಾರೆ, ಎರಡು ತುದಿಗಳಲ್ಲೂ ಉತ್ತಮ ಬೌಲಿಂಗ್ ಸಂಯೋಜನೆ ತೋರುವ ಸಿರಾಜ್, ಸದಾ ಚೆಂಡು ಸ್ಟಂಪ್ ನ ಸಂಪರ್ಕ ಪಡೆಯುವಂತೆ ಬೌಲಿಂಗ್ ಮಾಡುತ್ತಾರೆ. ಟ್ರೆಂಟ್ ಬೌಲ್ಟ್ ಹಾಗೂ ಕಗಿಸೊ ರಬಾಡ ಕೂಡ ಅನುಭವಿ ಬೌಲರ್ ಗಳಾಗಿದ್ದು ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಖಂಡಿತವಾಗಿಯೂ ಯಶಸ್ಸು ಪಡೆಯುತ್ತಾರೆ,” ಎಂದು ಡುಪ್ಲೆಸಿಸ್ ಪ್ರಶಂಸಿಸಿದ್ದಾರೆ.