ಅಕ್ಷಯ್ ಕುಮಾರ್ ನಟನೆಯ ಸಿನಿಮಾಗೆ ಬಂಡವಾಳ ಹೂಡಿದ್ರೆ ಕೈತುಂಬಾ ಹಣ ಬರುತ್ತೆ ಅನ್ನೋದು ಬಾಲಿವುಡ್ ನಿರ್ಮಾಪಕರ ನಂಬಿಕೆಯಾಗಿತ್ತು. ಅಂತೆಯೇ ಅಕ್ಕಿ ಮುಟ್ಟಿದೆಲ್ಲಾ ಚಿನ್ನವಾಗುವ ಕಾಲವು ಇತ್ತು. ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದವರು. ಆದರೆ ಇತ್ತೀಚೆಗೆ ಅಕ್ಷಯ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಬ್ಯಾಕ್ ಟು ಬ್ಯಾಕ್ ನೆಲಕಚ್ಚುತ್ತಿವೆ. ಇದರಿಂದ ನೊಂದ ನಟ ವಿಧಿ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನೊಂದುಕೊಂಡಿದ್ದಾರೆ.
ಈ ವರ್ಷ ಅಕ್ಷಯ್ ಕುಮಾರ್ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಈ ಎರಡೂ ಚಿತ್ರಗಳು ಫ್ಲಾಪ್ ಎನಿಸಿಕೊಂಡಿವೆ. ‘ಬಡೇ ಮಿಯಾ ಚೋಟೆ ಮಿಯಾ’ ಹೀನಾಯವಾಗಿ ಸೋತಿದೆ. ಅದೇ ರೀತಿ ‘ಸರ್ಫಿರಾ’ ಸಿನಿಮಾ ಕೂಡ ಸೋತು ಹೋಗಿದೆ. ಈ ಚಿತ್ರದ ಬಜೆಟ್ 100 ಕೋಟಿ ರೂಪಾಯಿ. ಆದರೆ, ಸಿನಿಮಾ ಗಳಿಸಿದ್ದು ಕೇವಲ 21 ಕೋಟಿ ರೂಪಾಯಿ. ಸ್ಟಾರ್ ಆಗಿ ಮೆರೆಯುತ್ತಿರುವ ಅಕ್ಷಯ್ ಕುಮಾರ್ಗೆ ಈ ರೀತಿ ಮುಖಭಂಗ ಆದರೆ ಬೇಸರ ಆಗಿಯೇ ಆಗುತ್ತದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ಪ್ರತಿ ಸಿನಿಮಾ ಹಿಂದೆಯೂ ಸಾಕಷ್ಟು ಶ್ರಮ ಇರುತ್ತದೆ. ನನ್ನ ಸಿನಿಮಾ ಸೋಲುವುದನ್ನು ನೋಡುವುದು ನೋವುಂಟು ಮಾಡುತ್ತದೆ. ಪ್ರತಿ ಸೋಲು ಕೂಡ ಯಶಸ್ಸಿನ ಮೌಲ್ಯವನ್ನು ತಿಳಿಸುತ್ತದೆ. ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ನನ್ನ ವೃತ್ತಿ ಜೀವನದ ಆರಂಭದಲ್ಲೇ ಸೋಲನ್ನು ಡೀಲ್ ಮಾಡುವುದನ್ನು ಕಲಿತೆ’ ಎಂದಿದ್ದಾರೆ ಅಕ್ಷಯ್ ಕುಮಾರ್. ಅಕ್ಷಯ್ ಕುಮಾರ್ ಅವರ ವೃತ್ತಿ ಜೀವನದ ಆರಂಭದಲ್ಲಿ ಸತತ ಸೋಲು ಕಂಡರು. ಈ ಕಾರಣಕ್ಕೆ ಅವರು ದೇಶ ತೊರೆದು ಕೆನಡಾದಲ್ಲಿ ಸೆಟಲ್ ಆಗಲು ಮುಂದಾಗಿದ್ದರು.
‘ಪ್ರತಿ ಸೋಲು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ, ನೋವನ್ನು ಕೊಡುತ್ತದೆ. ಆದರೆ, ಸಿನಿಮಾದ ವಿಧಿಯನ್ನು ಬದಲಿಸುವುದಿಲ್ಲ. ಅದು ನಮ್ಮ ನಿಯಂತ್ರಣದಲ್ಲಿ ಇಲ್ಲ. ಕಷ್ಟಪಟ್ಟು ಕೆಲಸ ಮಾಡೋದು ಮಾತ್ರ ನಿಮ್ಮ ಕೈಯಲ್ಲಿ ಇದೆ. ನಾನು ನನ್ನ ಮುಂದಿನ ಸಿನಿಮಾ ಬಗ್ಗೆ ಗಮನ ಹರಿಸುತ್ತೇನೆ’ ಎಂದಿದ್ದಾರೆ ಅಕ್ಷಯ್.
ಕಳೆದ ಕೆಲ ವರ್ಷಗಳಲ್ಲಿ ಅಕ್ಷಯ್ ಕುಮಾರ್ ನಟನೆಯ ಸುಮಾರು 11 ಸಿನಿಮಾಗಳು ರಿಲೀಸ್ ಆಗಿವೆ. ಈ ಪೈಕಿ ಸಿನಿಮಾಗಳು ಗೆದ್ದಿದ್ದು ಎರಡು ಸಿನಿಮಾಗಳು ನೆಲಕಚ್ಚಿವೆ.