ಜೆರುಸಲೇಂ: ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ವೈಫಲ್ಯದ ಹೊಣೆಹೊತ್ತು ಇಸ್ರೇಲಿ ಮಿಲಿಟರಿಯ ಮುಖ್ಯಸ್ಥ ಲೆ|ಜ| ಹೆರ್ಝಿ ಹಲೆವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಕ್ಟೋಬರ್ 7ರ ದಾಳಿಯಲ್ಲಿ ಮಿಲಿಟರಿಯ ವೈಫಲ್ಯದ ಹೊಣೆಹೊತ್ತು ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದರೆ ಮಹತ್ವದ ಯಶಸ್ಸಿನ ಸಂದರ್ಭ ಹುದ್ದೆ ತೊರೆಯುತ್ತಿದ್ದೇನೆ. ಗಾಝಾ ಯುದ್ಧದ ಗುರಿಗಳು ಬಹುತೇಕ ಈಡೇರಿವೆ. ಹಮಾಸ್ ಅನ್ನು ಇನ್ನಷ್ಟು ಶಕ್ತಿಗುಂದಿಸಲು ಸೇನೆಯು ಹೋರಾಟ ಮುಂದುವರಿಸುತ್ತದೆ ‘ ಎಂದು ರಾಜೀನಾಮೆ ಪತ್ರದಲ್ಲಿ ಹಲೆವಿ ಉಲ್ಲೇಖಿಸಿದ್ದಾರೆ.
ಹೆರ್ಝಿ ಹಲೆವಿ ರಾಜೀನಾಮೆ ಬೆನ್ನಲ್ಲೇ ಗಾಝಾದಲ್ಲಿ ಕಾರ್ಯಾಚರಣೆಯ ಹೊಣೆಹೊತ್ತಿರುವ ಇಸ್ರೇಲ್ನ ದಕ್ಷಿಣ ಮಿಲಿಟರಿ ಕಮಾಂಡ್ನ ಮುಖ್ಯಸ್ಥ ಮೇ|ಜ| ಯಾರೊನ್ ಫಿಂಕೆಲ್ಮಾನ್ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೆರ್ಝಿ ಹಲೆವಿ ಹಾಗೂ ಯಾರೊನ್ ಫಿಂಕೆಲ್ಮಾನ್ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಸೇನಾ ಮುಖ್ಯಸ್ಥರು ಮಾದರಿಯಾಗಿದ್ದಾರೆ. ಇದೇ ಮಾದರಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನುಸರಿಸಬೇಕು ಎಂದು ವಿರೋಧ ಪಕ್ಷ ಮುಖಂಡ ಯಾಯಿರ್ ಲ್ಯಾಪಿಡ್ ಆಗ್ರಹಿಸಿದ್ದಾರೆ.