ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೆಸರಿನಲ್ಲಿ ಫೇಸ್ಬುಕ್ ಖಾತೆ (Facebook Account) ತೆರೆದು, ಹಣ ಪಡೆದುಕೊಂಡು ವಂಚಿಸುತ್ತಿದ್ದಾತನನ್ನು ಚಿಕ್ಕಬಳ್ಳಾಪುರ (Chikkaballapura) ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ (Mysuru) ರಾಜೀವ್ ನಗರದ ನಿವಾಸಿ ಕಾರು ಚಾಲಕ ಮುದಾಸೀರ್ ಪಾಷಾ ಬಂಧಿತ ಆರೋಪಿ. ಈತ ‘ಪ್ರದೀಪ್ ಈಶ್ವರ್ ನಿಮ್ಮೊಂದಿಗೆ’ ಎಂಬ ಫೇಸ್ಬುಕ್ ಖಾತೆಯಲ್ಲಿ ಸಹಾಯದ ನೆಪದಲ್ಲಿ ಜನರಲ್ಲಿ ಹಣ ಪೀಕಿಸುತ್ತಿದ್ದ. ಅಲ್ಲದೇ ಕಾಮೆಂಟ್ ಸೆಕ್ಷನ್ನಲ್ಲಿ ಸಹಾಯಕ್ಕಾಗಿ ಮನವಿ ಮಾಡಿದವರಿಗೆ ಕರೆ ಮಾಡಿ ವಂಚನೆ ಮಾಡುತ್ತಿದ್ದ.
ತಾನು ಪ್ರದೀಪ್ ಈಶ್ವರ್ ಅವರ ಆಪ್ತ ಕಾರ್ಯದರ್ಶಿ ಎಂದು ಪರಿಚಯ ಮಾಡಿಕೊಂಡ ಈತ ಬಳಿಕ ಸಹಾಯ ಮಾಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ. ಖಾಸಿಂಸಾಬ್ ಎಂಬವರು ತಾನು ಬಡವನಾಗಿದ್ದು, ಶಾಸಕರ ಕಡೆಯಿಂದ ಏನಾದರೂ ಸಹಾಯ ಮಾಡುವಂತೆ ಕೇಳಿದ್ದಾರೆ. ಈ ವೇಳೆ ಪಾಷಾ ತನಗೆ 5,000 ರೂ. ಫೋನ್ ಪೇ ಮಾಡಿದರೆ ನಿಮಗೆ ಶಾಸಕರ ಕಡೆಯಿಂದ 4 ಲಕ್ಷ ರೂ. ಕೊಡಿಸುವುದಾಗಿ ಹೇಳಿದ್ದಾನೆ. ಇದನ್ನು ನಂಬಿ ಖಾಸಿಂ ಹಣ ವರ್ಗಾವಣೆ ಮಾಡಿದ್ದಾರೆ.
ವರ್ಗಾವಣೆಯ ಬಳಿಕ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಖಾಸಿಂ ಅವರಿಗೆ ತಾನು ವಂಚನೆಗೊಳಗಾಗಿರುವುದು ಅರಿವಾಗಿದೆ. ಇನ್ನೂ ಈ ಆರೋಪಿ ಮುದಾಸೀರ್ ಪಾಷಾ ಕೇವಲ ಪ್ರದೀಪ್ ಈಶ್ವರ್ ಹೆಸರು ಅಷ್ಟೇ ಅಲ್ಲದೇ ಖ್ಯಾತ ನಟ ಸೋನುಸೂದ್, ಹಾಗೂ ರಾಜಕೀಯ ಮುಖಂಡರಾದ ಕೆ ಜಿ ಎಫ್ ಬಾಬು, ಸಚಿವ ಜಮೀರ್ ಅಹಮದ್ ಹೆಸರಿನಲ್ಲೂ ಸಹ ದೋಖಾ ಮಾಡಿರೋದು ಪೊಲೀಸರ ತನಿಖೆ ವೇಳೆ ಬಯಲಾಗಿದೆ, ಸದ್ಯ ಮುದಾಸೀರ್ ಪಾಷಾ ಮಾಡಿದ ತಪ್ಪಿಗೆ ಚಿಕ್ಕಬಳ್ಳಾಪುರದ ಅಣಕನೂರು ಜೈಲು ಸೇರಿ ಕಂಬಿ ಎಣಿಸುವಂತಾಗಿದೆ.