ಬೆಂಗಳೂರು ;- ಬೆಳ್ಳಂದೂರು ಐಟಿ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿದ್ದ ಮಾಜಿ ಉದ್ಯೋಗಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನವೀನ್ ಪ್ರಸಾದ್ ಬಂಧಿತ ಆರೋಪಿ.
ಜೂನ್ 13 ರಂದು ಬೆಳಗ್ಗೆ ಬೆಳ್ಳಂದೂರಿನ ಹೊರವರ್ತುಲ ರಸ್ತೆಯಲ್ಲಿರುವ ಖಾಸಗಿ ಕಂಪನಿಗೆ ಕರೆ ಮಾಡಿದ್ದ ಅನಾಮಿಕ ‘ಕಂಪನಿಯಲ್ಲಿ ಬಾಂಬ್ ಇಟ್ಟಿದ್ದು ಕೆಲ ಹೊತ್ತಿನಲ್ಲಿ ಬಾಂಬ್ ಸ್ಪೋಟಗೊಳ್ಳಲಿದೆ’ ಎಂದಿದ್ದ.
ಆತಂಕಗೊಂಡು ಕಾರ್ಯಪ್ರವೃತ್ತರಾದ ಕಂಪನಿ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ತಂಡ ದೌಡಾಯಿಸಿ ಮೂಲೆ – ಮೂಲೆಯಲ್ಲಿ ಜಾಲಾಡಿದ ನಂತರ ಅದೊಂದು ಹುಸಿ ಬಾಂಬ್ ಕರೆ ಎಂದು ಖಚಿತವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಬಾಂಬ್ ಕರೆ ಬಂದ ಮೊಬೈಲ್ ನಂಬರ್ ಪರಿಶೀಲಿಸಿದಾಗ ಕಂಪನಿಯ ಮಾಜಿ ಉದ್ಯೋಗಿಯಾಗಿರುವ ನವನೀತ್ ಪ್ರಸಾದ್ ಕರೆ ಮಾಡಿರುವುದು ತಿಳಿದು ಬಂದಿತ್ತು. ಕಂಪನಿ ಸಿಬ್ಬಂದಿ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.