ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಎರಡು ವರ್ಷದ ಮಗುವನ್ನು ಕೊಂದು, ತಾಯಿ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸಿಗೇಹಳ್ಳಿಯಲ್ಲಿ ನಡೆದಿದೆ.
ಶೃತಿಕಾಳ ಮೃತ ಮಗು. ಚಿನ್ನಾ ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಆಂಧ್ರಪ್ರದೇಶದ ಚಿತ್ತೂರು ಮೂಲದ ಚಿನ್ನಾ ಮತ್ತು ಲಕ್ಷ್ಮೀ ನಾರಾಯಣ ದಂಪತಿ, ಮೂರು ತಿಂಗಳ ಹಿಂದೆ ಸೀಗೆಹಳ್ಳಿಗೆ ಬಂದು ವಾಸವಿದ್ದರು.
ಪತಿ ಲಕ್ಷ್ಮೀನಾರಾಯಣ ಪತ್ನಿ ಚಿನ್ನಾಗೆ ಪ್ರತಿದಿನ ಹಿಂಸೆ ನೀಡುತ್ತಿದ್ದನು. ಪತಿ ಲಕ್ಷ್ಮೀನಾರಾಯಣನ ಕಾಟಕ್ಕೆ ಚಿನ್ನಾ ಬೇಸತ್ತಿದ್ದಳು. ಮಾರ್ಚ್ 16 ರ ರಾತ್ರಿ ಲಕ್ಷ್ಮೀನಾರಾಯಣ ಪತ್ನಿ ಜೊತೆ ಜಗಳವಾಡಿದ್ದಾನೆ.
ಇದರಿಂದ ಮನನೊಂದು ಚಿನ್ನಾ ಮರುದಿನ ಮಾರ್ಚ್ 17 ರ ಬೆಳಿಗ್ಗೆ ಮಗು ಶೃತಿಕಾಳ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಚೂರಿಯಿಂದ ಕತ್ತು ಸೀಳಿಕೊಂಡು ಆತ್ಮಹತ್ಯಗೆ ಯತ್ನಿಸಿದ್ದಾರೆ.
ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಮನೆಯೊಳಗೆ ನುಗ್ಗಿ, ತಕ್ಷಣ ಚಿನ್ನಾಳನ್ನ ಆಸ್ಪತ್ರೆಗೆ ದಾಖಲಸಿದ್ದಾರೆ. ಆಸ್ಪತ್ರೆಯಲ್ಲಿ ಚಿನ್ನಾಗೆ ಚಿಕಿತ್ಸೆ ಮುಂದುವರೆದಿದೆ. ಕೆ.ಆರ್.ಪುರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.