ಪ್ರೀತಿ ಮಾಯೆ ಹುಷಾರು ಅಂತಾರೆ. ಈ ಪ್ರೀತಿಗಾಗಿ ಪ್ರೇಮಿಗಳು ಕೆಲವೊಮ್ಮೆ ಯಾವ ಹಂತಕ್ಕೂ ಬೇಕಾದರು ಹೋಗುತ್ತಾರೆ. ಇಲ್ಲೊಬ್ಬ ಯುವತಿ ಕೂಡ ಪ್ರೀತಿಗಾಗಿ ಹೆತ್ತು ಹೊತ್ತು ಸಾಕಿದ ತಂದೆ ತಾಯಿ ಸೇರಿದಂತೆ ಮನೆಯ 13 ಮಂದಿಗೆ ವಿಷಯ ಹಾಕಿ ಕೊಲೆ ಮಾಡಿದ್ದಾರೆ. ಅಪ್ಪ, ಅಮ್ಮ ಎನ್ನದೆಯೇ ಪ್ರಿಯಕರ ಜೊತೆ ಸೇರಿ 13 ಜನರು ಉಸಿರು ನಿಲ್ಲಿಸಿದ್ದಾರೆ.
ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. 13 ಜನರನ್ನು ಕೊಂದ ಪಾಪಿಯ ಹೆಸರು ಸೈಯಿಷ್ಟಾ. ಈಕೆಯ ಮನೆಯವರಿಗೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿರುವುದು ಬಯಲಾಗಿದೆ. ಆಕೆ ಹೇಳುವ ಪ್ರಕಾರ ಆಕೆ ಇಷ್ಟಪಟ್ಟವನ್ನು ಮದುವೆಯಾಗಲು ಮನೆಯವರು ಒಪ್ಪಿರಲಿಲ್ಲ, ತನ್ನ ಇಷ್ಟದ ಹುಡುಗನನ್ನು ಮದುವೆಯಾಗಲು ಮನೆಯವರು ಒಪ್ಪದ ಕಾರಣ ಯುವತಿ ಕೋಪಗೊಂಡಿದ್ದಳು. ನಂತರ ತನ್ನ ಪ್ರಿಯಕರನೊಂದಿಗೆ ಸಂಚು ರೂಪಿಸಿ, ಆಕೆಯ ಪೋಷಕರು ಸೇರಿದಂತೆ ಕುಟುಂಬ ಸದಸ್ಯರಿಗೆ ವಿಷ ಉಣಿಸಿ ಹತ್ಯೆ ಮಾಡಿದ್ದಾಳೆ.
ಆಹಾರ ಸೇವಿಸಿದ ನಂತರ ಎಲ್ಲಾ 13 ಸದಸ್ಯರು ಅಸ್ವಸ್ಥಗೊಂಡರು ಮತ್ತು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಎಲ್ಲರೂ ಕೊನೆಯುಸಿರೆಳೆದರು. ಮರಣೋತ್ತರ ಪರೀಕ್ಷೆ ಮಾಡಿದಾಗ ಈ ಜನರು ವಿಷಪೂರಿತ ಆಹಾರದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇನಾಯತ್ ಶಾ ತಿಳಿಸಿದ್ದಾರೆ.
ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದಾಗ ಮನೆಯಲ್ಲಿ ರೊಟ್ಟಿ ಮಾಡಲು ಬಳಸುವ ಗೋಧಿ ಹಿಟ್ಟಿಗೆ ಮಗಳು ಮತ್ತು ಆಕೆಯ ಗೆಳೆಯ ವಿಷ ಹಾಕಿರುವುದು ಗೊತ್ತಾಗಿದೆ ಎಂದರು.
ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಆಕೆ ಕುಟುಂಬವು ಇಷ್ಟಪಟ್ಟ ಹುಡುಗನನ್ನು ಮದುವೆಯಾಗಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಹಾಗಾಗಿ ಗೆಳೆಯನ ಸಹಾಯದಿಂದ ಎಲ್ಲರನ್ನೂ ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಯುವತಿ ಬಾಯಿ ಬಿಟ್ಟಿದ್ದಾಳೆ.