ಇಂದ್ರಜಿತ್ ಲಂಕೇಶ್ ಸಮರ್ಜಿತ್ ಲಂಕೇಶ್ ನಟನೆಯ ‘ಗೌರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಮೂಲಕ ಸಮರ್ಜಿತ್ ಹಾಗೂ ನಟಿ ಸಾನ್ಯಾ ಅಯ್ಯರ್ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿಕೊಡ್ತಿದ್ದಾರೆ. ಈ ಚಿತ್ರದ ಹಾಡುಗಳನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ವೇಳೆ ನಟ ದರ್ಶನ್ ಪ್ರಕರಣದ ಬಗ್ಗೆಯೂ ಇಂದ್ರಜಿತ್ ಪ್ರತಿಕ್ರಿಯೆ ನೀಡಿದ್ದಾರೆ.
‘ದರ್ಶನ್ ಅವರಿಗೆ ನಾನು ಯಾಕೆ ಟಾಂಗ್ ನೀಡಲಿ? ಬಸವಣ್ಣನ ವಚನ ಹೇಳಿದ್ದೇನೆ ಅಷ್ಟೇ. ದರ್ಶನ್ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಪತ್ರಕರ್ತನಾಗಿ ನಾನು ಕೆಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೇನೆ ಅಷ್ಟೆ. ಅದನ್ನು ಹೊರತುಪಡಿಸಿ ನಮ್ಮ ನಡುವೆ ಏನೂ ಇಲ್ಲ. ಅನ್ಯಾಯ ಆದಾಗ ಧ್ವನಿ ಎತ್ತುವುದನ್ನು ನಾನು ನನ್ನ ತಂದೆ ಲಂಕೇಶ್ ಅವರಿಂದ ಕಲಿತ್ತದ್ದು. ಕೊಲೆಯಾದ ರೇಣುಕಾ ಸ್ವಾಮಿ ಕುಟುಂಬದವರಿಗೆ ನ್ಯಾಯ ಸಿಗಬೇಕು. ವಿಜಯಲಕ್ಷ್ಮಿ ಮತ್ತು ಅವರ ಮಗನಿಗೆ ದೇವರು ಶಕ್ತಿ ಕೊಡಲಿ’ ಎಂದಿದ್ದಾರೆ ಇಂದ್ರಜಿತ್ ಲಂಕೇಶ್.
ಸೋಶಿಯಲ್ ಮೀಡಿಯಾ ಬಳಕೆ ಬಗ್ಗೆ ಇಂದ್ರಜಿತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಾಮಾಜಿಕ ಜಾಲತಾಣ ಅದ್ಭುತ ಮಾಧ್ಯಮ. ಆದರೆ ಅದು ಬಹಳ ಕೆಟ್ಟದಾಗಿ ಬಳಕೆ ಆಗುತ್ತಿದೆ’ ಎಂದಿರುವ ಅವರು ಸರ್ಕಾರ ಮತ್ತು ಸೈಬರ್ ಕ್ರೈಂ ವಿಭಾಗದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸೂಕ್ತ ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ.
‘ಯುವ ಜನತೆ ಹಾಳಾಗುತ್ತಿದೆ. ಇತ್ತೀಚಿಗಷ್ಟೇ ಎಸ್ಎಸ್ಎಲ್ಸಿಯಲ್ಲಿ ರ್ಯಾಂಕ್ ಬಂದ ಹುಡುಗಿಯನ್ನು ಆಡಿಕೊಳ್ಳಲಾಯಿತು. ಆಕೆಯ ರೂಪದ ಜನರು ಬಗ್ಗೆ ಕೆಟ್ಟ ಕಮೆಂಟ್ ಮಾಡಿದರು. ನಾವು ಇಂಥ ದುರಂತದ ಸ್ಥಿತಿಯಲ್ಲಿ ಇದ್ದೀವಿ. ಸಾಮಾಜಿಕ ಜಾಲತಾಣದಿಂದಲೇ ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ, ಮಂತ್ರಿಗಳ ಮನೆಯಲ್ಲಿ ಈ ರೀತಿ ಆದಾಗ ಗೊತ್ತಾಗುತ್ತೆ. ಶೀಘ್ರದಲ್ಲಿ ಇದರ ಬಗ್ಗೆ ಆ್ಯಕ್ಷನ್ ತೆಗೆದುಕೊಳ್ಳಬೇಕು. ನಾನು ಕೂಡ ಇದರ ವಿರುದ್ಧ ಹೋರಾಟ ಮಾಡ್ತೀನಿ’ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.