ವೆಲ್ಲಿಂಗ್ಟನ್: 5 ಮಕ್ಕಳ ತಾಯಿಯಾಗಿದ್ದ ನ್ಯೂಜಿಲೆಂಡ್ನ (New Zealand) ಖ್ಯಾತ ಬಾಡಿಬಿಲ್ಡರ್ ಮಹಿಳೆ ರೇಚೆಲ್ ಚೇಸ್ (41) (Raechelle Chase) ನಿಧನರಾಗಿದ್ದಾರೆ. 5 ಮಕ್ಕಳ ತಾಯಿಯಾಗಿದ್ದ ಚೇಸ್ ಫೇಸ್ಬುಕ್ನಲ್ಲಿ 14 ಲಕ್ಷ ಫಾಲೋವರ್ಸ್ಗಳನ್ನ ಹೊಂದಿದ್ದರು. ಸದ್ಯ ಅವರು ಸಾವನ್ನಪ್ಪಿರುವುದಾಗಿ ಮಗಳು ಸ್ಪರ್ಶ ತಿಳಿಸಿದ್ದಾರೆ. ನ್ಯೂಜಿಲೆಂಡ್ ಪೊಲೀಸರು (New Zealand Police) ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ರೇಚೆಲ್ ಚೇಸ್ ಸಾವಿನ ಇತ್ತೀಚಿನ ಸ್ವರೂಪಗಳನ್ನು ಗಮನಿಸಿದ್ರೆ ಸದ್ಯ ಯಾವುದೇ ಅನುಮಾನಗಳು ಕಂಡುಬಂದಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿರುವ ಮಗಳು ಸ್ಪರ್ಶ, ಹೆಚ್ಚು ಅಭಿಮಾನಿಗಳನ್ನು ಗಳಿಸಬೇಕೆಂಬ ಹುಚ್ಚು ಅವರಿಗಿತ್ತು. ವಿಶ್ವದಾದ್ಯಂತ ಲಕ್ಷಾಂತರ ಜನರು ನನ್ನ ಅಮ್ಮನ ಬಾಡಿಬಿಲ್ಟಿಂಗ್ನಿಂದ ಪ್ರೇರಣೆ ಪಡೆದಿದ್ದರು. ಆದ್ರೆ ಅಮ್ಮನನ್ನು ಕಳೆದುಕೊಂಡಿರುವುದು ತುಂಬಾ ದುಃಖವಾಗುತ್ತಿದೆ. ಅವರ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಲ್ಲ ಎಂದು ಹೇಳಿದ್ದಾರೆ.
ರೇಚೆಲ್ ಚೇಸ್, ಕ್ರಿಸ್ ಚೇಸ್ ಎಂಬಾತನನ್ನ ಮದುವೆಯಾಗಿದ್ದರು. ಆದ್ರೆ ಪತಿ ಕ್ರಿಸ್ ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು, 10 ವರ್ಷಗಳ ಕಾಲ ಜೈಲಿನಲ್ಲಿದ್ದರು. ಹಾಗಾಗಿ ಪತಿಗೆ 2016 ರಲ್ಲಿ ಡಿವೋರ್ಸ್ ನೀಡಿದರು ಎಂದು ಮೂಲಗಳು ತಿಳಿಸಿವೆ. ಇನ್ನೂ ಚಿಕ್ಕವಯಸ್ಸಿನಿಂದಲೇ ಬಾಡಿ ಬಿಲ್ಡಿಂಗ್ನಲ್ಲಿ ಆಸಕ್ತಿ ಹೊಂದಿದ್ದ ರೇಚಲ್ ಚೇಸ್ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಗೆದ್ದಿದ್ದರು. 2011 ರಲ್ಲಿ, ಲಾಸ್ ವೇಗಾಸ್ನಲ್ಲಿ ನಡೆದ ಪ್ರತಿಷ್ಠಿತ ಒಲಂಪಿಯಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನ್ಯೂಜಿಲೆಂಡ್ನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು.