ಮಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಂಗೀತ್ ಶಿವನ್ 61ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ.
ಮೂಲತಃ ಕೇರಳದ ತಿರುವನಂತಪುರಂನವರಾದ ಸಂಗೀತ್ ಶಿವನ್, 1989ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಆಮಿರ್ ಖಾನ್ ನಟನೆಯ ‘ರಾಖ್’ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಆರಂಭಿಸಿದರು. ಬಳಿಕ 1990ರಲ್ಲಿ ಮಲಯಾಳಂನ ‘ವ್ಯೂಹಂ’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದರು. ಮೋಹನ್ಲಾಲ್ ನಟನೆಯ ‘ಯೋಧ’ ಸಿನಿಮಾಗೆ ನಿರ್ದೇಶನ ಮಾಡಿ ಖ್ಯಾತಿ ಘಳಿಸಿದ್ದರು.
ಬಾಲಿವುಡ್ನಲ್ಲಿ ಸಂಗೀತ್ ಶಿವನ್ ಅವರು ತಮ್ಮದೇ ಚಾಪು ಮೂಡಿಸಿದ್ದರು. ‘ಚುರಾ ಲಿಯಾ ಹೈ ತುಮ್ ನೇ’, ‘ಕ್ಯಾ ಕೂಲ್ ಹೈ ಹಮ್’, ‘ಅಪ್ನ ಸಪ್ನ ಮನಿ ಮನಿ’, ‘ಯಮ್ಲಾ ಪಗ್ಲ ದೀವಾನ 2’ ಮುಂತಾದ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದರು. ಮಲಯಾಳಂನ ‘ರೋಮಾಂಚಂ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಅವರು ಮುಂದಾಗಿದ್ದರು. ಆ ಕೆಲಸ ಪೂರ್ಣಗೊಳ್ಳುವುದಕ್ಕೂ ಮೊದಲೇ ಸಂಗೀತ್ ಶಿವನ್ ನಿಧನರಾಗಿದ್ದಾರೆ.
ಸುನೀಲ್ ಶೆಟ್ಟಿ, ರಿತೇಶ್ ದೇಶಮುಖ್, ಜಾಕಿ ಶ್ರಾಫ್, ಸೆಲಿನಾ ಜೇಟ್ಲಿ, ಚಂಕಿ ಪಾಂಡೆ, ರಾಜ್ಪಾಲ್ ಯಾದವ್, ತುಷಾರ್ ಕಪೂರ್, ಇಶಾ ಕೊಪ್ಪಿಕರ್, ನೇಹಾ ದೂಪಿಯಾ, ಅನುಪಮ್ ಖೇರ್ ಮುಂತಾದ ಸೆಲೆಬ್ರಿಟಿಗಳ ಜೊತೆ ಸಂಗೀತ್ ಶಿವನ್ ಕೆಲಸ ಮಾಡಿದ್ದರು. ನಿರ್ದೇಶಕನ ಅಗಲಿಕೆಗೆ ರಿತೇಶ್ ದೇಶಮುಖ್ ಸಂತಾಪ ಸೂಚಿಸಿದ್ದಾರೆ. ‘ಸಂಗೀತ್ ಶಿವನ್ ಸರ್ ಇನ್ನಿಲ್ಲ ಎಂಬುದು ತಿಳಿದು ಶಾಕ್ ಆಯಿತು. ಅವರು ತುಂಬ ಒಳ್ಳೆಯ ವ್ಯಕ್ತಿ ಆಗಿದ್ದರು. ಅವರ ಕುಟುಂಬದವರಿಗೆ ನನ್ನ ಸಂತಾಪಗಳು. ಅವರನ್ನು ಮತ್ತು ಅವರ ನಗುವನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ರಿತೇಶ್ ದೇಶಮುಖ್ ಟ್ವೀಟ್ ಮಾಡಿದ್ದಾರೆ.