ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕಿಯರಲ್ಲಿ ಒಬ್ಬರಾದ ಅಲ್ಕಾ ಯಾಗ್ನಿಕ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಂಗೀತವನ್ನೇ ಉಸಿರಾಗಿಸಿಕೊಂಡ ಈಕೆಗೆ ಇದೀಗ ಕಿವಿ ಕೇಳಿಸುತ್ತಿಲ್ಲ. ಈ ಸಮಸ್ಯೆಯನ್ನು ಸ್ವತಃ ಅಲ್ಕಾ ಯಾಗ್ನಿಕ್ ಹೇಳಿಕೊಂಡಿದ್ದಾರೆ.
ವೃತ್ತಿಪರ ಗಾಯಕಿ ಎಂದಮೇಲೆ ಪ್ರತಿದಿನ ಸಂಗೀತವನ್ನು ಕೇಳಿಸಿಕೊಳ್ಳಬೇಕು ಹಾಗೂ ಅಭಿಮಾನಿಗಳಿಗೆ ಇಷ್ಟವಾಗುವಂತೆ ಹಾಡಬೇಕು. ಈ ಕೆಲಸಕ್ಕೆ ತುಂಬಾ ಚೆನ್ನಾಗಿ ಕಿವಿ ಕೇಳಿಸುವುದು ಅತ್ಯಗತ್ಯ. ಆದರೆ ಈಗ ಅಲ್ಕಾ ಯಾಗ್ನಿಕ್ ಗೆ ಕಿವಿ ಕೇಳಿಸುತ್ತಿಲ್ಲ ಎಂಬ ವಿಷಯ ಕೇಳಿ ಸಾಕಷ್ಟು ಮಂದಿ ಶಾಕ್ ಆಗಿದ್ದಾರೆ.
‘ನನ್ನೆಲ್ಲ ಅಭಿಮಾನಿಗಳು, ಸ್ನೇಹಿತರು, ಫಾಲೋವರ್ಸ್ ಮತ್ತು ಹಿತೈಷಿಗಳಿಗೆ ಈ ವಿಷಯ ತಿಳಿಸುತ್ತಿದ್ದೇನೆ. ಕೆಲವು ವಾರಗಳ ಹಿಂದೆ ನಾನು ವಿಮಾನದಿಂದ ಹೊರಬಂದಾಗ ನನಗೆ ಏನೂ ಕೇಳಿಸುತ್ತಿಲ್ಲ ಎಂಬುದು ತಿಳಿಯಿತು. ಆ ಬಳಿಕ ಸ್ವಲ್ಪ ಧೈರ್ಯ ತಂದುಕೊಂಡು ಈ ಬಗ್ಗೆ ಮೌನ ಮುರಿಯುತ್ತಿದ್ದೇನೆ. ಇತ್ತೀಚೆಗೆ ಯಾಕೆ ನಾನು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಕೇಳುತ್ತಿದ್ದ ಸ್ನೇಹಿತರು ಮತ್ತು ಹಿತೈಷಿಗಳಿಗಾಗಿ ಈ ವಿಷಯ ಹೇಳುತ್ತಿದ್ದೇನೆ’. ವೈರಲ್ ಅಟ್ಯಾಕ್ನಿಂದಾಗಿ ಅಪರೂಪದ ಸಂವೇದನಾ ನರಗಳ ಶ್ರವಣ ನಷ್ಟವಾಗಿದೆ ಎಂದು ವೈದ್ಯರು ಎಂದು ಇನ್ಸ್ಟಾಗ್ರಾಮ್ನಲ್ಲಿ ಅಲ್ಕಾ ಯಾಗ್ನಿಕ್ ಅವರು ಪೋಸ್ಟ್ ಮಾಡಿದ್ದಾರೆ.
‘ಈ ರೀತಿ ಸಮಸ್ಯೆ ಆಗಿದೆ ಎಂಬುದನ್ನು ವೈದ್ಯರು ತಿಳಿಸಿದರು. ನನಗೆ ತಿಳಿಯದಂತೆಯೇ ಈ ರೀತಿ ಆಗಿದೆ. ನಾನು ಇದರಿಂದ ಗುಣಮುಖವಾಗಲು ಪ್ರಯತ್ನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನೀವು ನನಗಾಗಿ ಪ್ರಾರ್ಥಿಸಿ. ಹೆಡ್ಫೋನ್ ಅಥವಾ ಇತರೆ ಸಾಧನಗಳ ಮೂಲಕ ಜೋರಾದ ಶಬ್ದವನ್ನು ಕೇಳಿಸಿಕೊಳ್ಳಬೇಡಿ. ನನ್ನ ವೃತ್ತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಒಂದು ದಿನ ಹಂಚಿಕೊಳ್ಳುತ್ತೇನೆ. ನಿಮ್ಮೆಲ್ಲರ ಪ್ರೀತಿ, ಬೆಂಬಲದಿಂದ ಗುಣಮುಖವಾಗಿ ಮತ್ತೆ ಬರುತ್ತೇನೆ ಎಂಬ ನಂಬಿಕೆ ನನಗಿದೆ. ಈ ಕಷ್ಟದ ಸಂದರ್ಭದಲ್ಲಿ ನನ್ನನ್ನು ಅರ್ಥ ಮಾಡಿಕೊಳ್ಳುವ ನೀವು ಮತ್ತು ನಿಮ್ಮ ಬೆಂಬಲ ನನಗೆ ಅತಿ ಮುಖ್ಯ’ ಎಂದು ಅಲ್ಕಾ ಯಾಗ್ನಿಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
58 ವರ್ಷ ವಯಸ್ಸಿನ ಅಲ್ಕಾ ಯಾಗ್ನಿಕ್ ಬಾಲಿವುಡ್ನ ಪ್ರಮುಖ ಗಾಯಕರಲ್ಲಿ ಒಬ್ಬರು. ಈ ವರ್ಷ ಅವರು ‘ಕ್ರೂ’ ಮತ್ತು ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.