ನವದೆಹಲಿ: ವಿಶ್ವದ ನಂ 1 ಶ್ರೀಮಂತ ಎಲನ್ ಮಸ್ಕ್ ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಟ್ವಿಟರ್ ಮಾಲೀಕರಾಗಿರುವ ಮಸ್ಕ್, ಟ್ವಿಟರ್ ಜಾಲತಾಣ ವೇದಿಕೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ. ಹಕ್ಕಿಯ ಲೋಗೋದಿಂದಲೇ ಸಖತ್ ಸದ್ದು ಮಾಡಿದ್ದ ಟ್ವಿಟರ್ ನ ಲೋಗೋ ಬದಲಾಯಿಸಲು ಮಸ್ಕ್ ಮುಂದಾಗಿದ್ದಾರೆ.
ಟ್ವಿಟರ್ ಬರ್ಡ್ ಬದಲು ಎಕ್ಷ್ ಲೋಗೋ ಮೊರೆ ಹೋಗುವ ಸುಳಿವನ್ನು ವಿಡಿಯೋ ಮೂಲಕ ನೀಡಿದ್ದಾರೆ. ಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್ಗೆ ವಿದಾಯ ಹೇಳುತ್ತೇವೆ. ಇಂದು ರಾತ್ರಿ ಉತ್ತಮವಾದ ಎಕ್ಷ್ ಲೋಗೋವನ್ನು ಪೋಸ್ಟ್ ಮಾಡಿದ್ದಲ್ಲಿ, ನಾಳೆಯಿಂದ ಅದೇ ಲೋಗೋದೊಂದಿಗೆ ಮುಂದುವರಿಯಲಿದ್ದೇವೆ ಎಂದು ಮಸ್ಕ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಸ್ಕ್ ಹಂಚಿಕೊಂಡಿಲ್ಲ.
ಬಹಳ ಹಿಂದಿನಿಂದಲೂ ಮಸ್ಕ್ ಬ್ಲೂ ಬರ್ಡ್ ಬದಲು ಎಕ್ಷ್ ಎಂಬ ಹೆಸರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಏಪ್ರಿಲ್ನಲ್ಲಿ ಟ್ವಿಟರ್ನ ಹೊಸ ಸಿಇಒ ಲಿಂಡಾ ಯಾಕರಿನೊ ಅವರನ್ನು ಸ್ವಾಗತಿಸುವಾಗ, ಟ್ವಿಟರ್ ವೇದಿಕೆಯನ್ನು ಎಕ್ಸ್ ದಿ ಎವೆರಿಥಿಂಗ್ ಆಯಪ್ ಆಗಿ ಪರಿವರ್ತಿಸಲು ಲಿಂಡಾ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮಸ್ಕ್ ಟ್ವೀಟ್ ಮಾಡಿದ್ದರು. ಇದೀಗ ಮಸ್ಕ್ ಬರ್ಡ್ ಬದಲಿಗೆ ಎಕ್ಸ್ ಸೇರಿಸುವ ಮೂಲಕ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ.