ಗಡಿ ಜಿಲ್ಲೆಯಲ್ಲಿಅನ್ನದಾತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಅತಿವೃಷ್ಟಿಯೋ, ಅನಾವೃಷ್ಟಿಯೋ ಒಟ್ಟಿನಲ್ಲಿ ಯಾವುದೋ ಒಂದು ಬಾಬತ್ತಿಲ್ಲಿ ಸಾಲದ ಸುಳಿಗೆ ಸಿಲುಕಿ, ಅದರಿಂದ ಹೊರಬರಲಾರದೆ ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ದುರಂತವೆಂದರೆ ಜಿಲ್ಲೆಯಲ್ಲಿ ಕಳೆದ 15 ತಿಂಗಳಲ್ಲಿ 90 ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲ ಮನ್ನಾ, ಬೆಳೆ ವಿಮೆ ಆಸರೆ ಇದ್ದರೂ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ.
ಬೆಳಗಾವಿ ಜಿಲ್ಲೆಯಲ್ಲಿ ರೈತರ ಸಾವಿನ ಪ್ರಕರಣಗಳು ಕಡಿಮೆಯಾಗಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸಿ, ಆತ್ಮಹತ್ಯೆ ತಗ್ಗಿಸುವ ಪ್ರಯತ್ನವೆ ನಡೆಯುತ್ತಿಲ್ಲ ಜಿಲ್ಲೆಯಲ್ಲಿ. ಅತಿವೃಷ್ಟಿ/ ಅನಾವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿ ನೇಗಿಲ ಯೋಗಿ ಆತ್ಮಹತ್ಯೆಗೆ ಶರಣು ಎನ್ನುತ್ತಿದ್ದಾನೆ. ಕಳೆದ ವರ್ಷ ಬೆಳಗಾವಿ ಜಿಲ್ಲೆಯ 15 ತಾಲ್ಲೂಕುಗಳು ಬರ ಪೀಡಿತವೆಂದು ಸರ್ಕಾರ ಘೋಷಣೆ ಮಾಡಿತ್ತು. ಆದ್ರೆ ಬರ, ಸೂಕ್ತ ಬೆಲೆ ಸಿಗದೆ, ಸಾಲಗಾರರು, ಬ್ಯಾಂಕುಗಳ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2023/24 ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ 82 ರೈತರಿಗೆ ಪರಿಹಾರ ವಿತರಣೆ ಮಾಡಿದ್ದರು ಆದ್ರೆ ಅದೇ 2024 ರ ಏಪ್ರಿಲ್1 ರಿಂದ ಈವರೆಗೂ 8 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತಕ್ಕೆ ಆತ್ಮಹತ್ಯೆ ಪರಿಹಾರ ಕೋರಿ 102 ಅರ್ಜಿ ಸಲ್ಲಿಕೆ ಆಗಿದ್ದವು. ಇದರಲ್ಲಿ ಸೂಕ್ತ ದಾಖಲೆಗಳ ಇಲ್ಲದ ಕಾರಣಕ್ಕೆ 20 ಅರ್ಜಿಗಳನ್ನ ತಿರಸ್ಕಾರಗೊಂಡಿವೆ. ತಮ್ಮ ಹಕ್ಕಿಗಾಗಿ ರೈತರು ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ ಆದ್ದರಿಂದ ಆತ್ಮಹತ್ಯೆ ತಡೆಗಟ್ಟಲು ಸರ್ಕಾರಕ್ಕೆ ರೈತ ನಾಯಕರ ಒತ್ತಾಯ ಮಾಡಿದ್ದಾರೆ.