ಗದಗ: ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ರೈತರ ಜಮೀನನ್ನು ವಕ್ಫ್ ಖಾತೆಗೆ ಸೇರಿಸಲು ತೋರಿದ ಕೈಚಳಕ ಬಯಲಾಗಿತ್ತು. ಇದರಿಂದ ಆಕ್ರೋಶಗೊಂಡ ರೈತರು ಹೋರಾಟಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಪಹಣಿಗಳಲ್ಲಿದ್ದ ವಕ್ಫ್ ಹೆಸರನ್ನು ಡಿಲೀಟ್ ಮಾಡಲಾಗಿದೆ.
ಇದರ ಬೆನ್ನಲ್ಲೇ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್ ಹೆಸರು ನಮೂದಿಸಲಾಗಿದೆ.
ಹೌದು ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಶ್ರೀ ಅಮ್ಮದಾನೇಶ್ವರ ವಿದ್ಯಾವರ್ಧಕ ಪ್ರಸಾದ ನಿಲಯ ಸಮಿತಿಯ ಉಚಿತ ಪ್ರಸಾದ ನಿಲಯಕ್ಕೆ ಸೇರಿದ 15.06 ಎಕರೆಯಲ್ಲಿ 11.19 ಎಕರೆ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ಕೋಡಿಕೊಪ್ಪ ವೀರಪ್ಪಜ್ಜನವರ ಹಾಗೂ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರ ಉಚಿತ ಪ್ರಸಾದ ನಿಲಯದ ಆಸ್ತಿ ಸರ್ವೆ ನಂಬರ್ 410/2ಬಿ ಈಗ ರಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನೋಂದಣಿಯಾಗಿದೆ.
ಲಿಂಗೈಕ್ಯ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಶ್ರೀಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ. 11ರಲ್ಲಿ 2019-2020 ರಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ಸೇರ್ಪಡೆಯಾಗಿದೆ. ಉಚಿತ ಪ್ರಸಾದ ನಿಲಯಕ್ಕೆ ಸ್ಥಳೀಯ ರೈತರು, ದಾನಿಗಳ ಸಹಕಾರದಿಂದ ಸಾಕಷ್ಟು ಭೂಮಿಯನ್ನು ಶ್ರೀಮಠಕ್ಕೆ ನೀಡಲಾಗಿತ್ತು. ಆದರೆ, 2019-20 ರಲ್ಲಿ ಉಚಿತ ಪ್ರಸಾದ ನಿಲಯದ 15.06 ಎಕರೆ ಆಸ್ತಿಯಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ಇದು ಭಕ್ತರು ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಈ ಬಗ್ಗೆ ಹಾಲಕೇರಿ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಪ್ರತಿಕ್ರಿಯಿಸಿದ್ದು, 500 ವರ್ಷಗಳ ಇತಿಹಾಸ ಇರುವ ಮಠದ ಆಸ್ತಿ ವಕ್ಫ್ ಬೋರ್ಡ್ ಪಾಲಾಗಿದೆ. ನರೇಗಲ್ ಪಟ್ಟಣದ ಪ್ರಸಾದ ನಿಲಯದ 11.19 ಗುಂಟೆ ಎಕರೆ ಆಸ್ತಿ ವಕ್ಫ್ ಹೆಸರಿಗೆ ನಮೂದಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ವಕ್ಫ್ ಕಾನೂನು ಮರುಪರಿಶೀಲನೆಗೆ ಮಠದ ಭಕ್ತರು ಹಾಗೂ ಶ್ರೀಗಳು ಒತ್ತಾಯ ಮಾಡಿದ್ದಾರೆ. ನಮ್ಮ ಆಸ್ತಿ ಮಠಕ್ಕೆ ಮರಳಿ ಬಿಟ್ಟು ಕೊಡುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ. ಸರ್ಕಾರ ಕೂಡಲೇ ಮಠದ ಆಸ್ತಿ ಮಠಕ್ಕೆ ಬದಲಾಯಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಭಕ್ತರು ಎಚ್ಚರಿಕೆ ನೀಡಿದ್ದಾರೆ.