ಬೆಂಗಳೂರು:- ರೈತರಿಗೆ ಚಿಲ್ಲರೆ ಕಾಸಿನ ಭಿಕ್ಷೆ ಬೇಡ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಸಂಬಂಧ X ಮಾಡಿರುವ ಅವರು,ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಿರುವ ಸಿದ್ದರಾಮಯ್ಯ ಸರ್ಕಾರ ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಪರಿಹಾರವಾಗಿ ಒಟ್ಟು 105 ಕೋಟಿ ರೂ. ಬಿಡುಗಡೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಕಾರಣವಾಗಿದೆ ಎಂದರು.
ರಾಜಕೀಯ ಅಸ್ತಿತ್ವಕ್ಕಾಗಿ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಬೊಮ್ಮಾಯಿ, ರೈತರ ಹಿತ ಕಾಯುವುದರಲ್ಲಿ ನನ್ನ ರಾಜಕೀಯ ಅಸ್ತಿತ್ವ ಇದೆ ಎಂದರು.
ಮುಖ್ಯಮಂತ್ರಿಗಳೇ ತಾವು ಬಿಡುಗಡೆ ಮಾಡಿರುವ 105 ಕೋಟಿ ಎಷ್ಟು ಲಕ್ಷ ಜನ ರೈತರಿಗೆ ತಲುಪಲಿದೆ?ಅರೆಕಾಸಿನ ಮಜ್ಜಿಗೆಗೂ ಸಾಲುವುದಿಲ್ಲ. ಅಗಾಧ ಪ್ರಮಾಣದ ಬರ ಮತ್ತು ತಾವು ಬಿಡುಗಡೆ ಮಾಡಿರುವ ಹಣವನ್ನು ನೋಡಿದರೆ ರೈತರಿಗೆ ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತೆ ಕಾಣುತ್ತದೆ ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
NDRF ಮಾರ್ಗಸೂಚಿ ಪ್ರಕಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹಣದ ಬಗ್ಗೆ ನಾವೂ ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಆದರೆ, ನಿಮ್ಮನ್ನು ಆಯ್ಕೆ ಮಾಡಿ ಅಧಿಕಾರದ ಗದ್ದುಗೆಗೆ ಕೂಡಿಸಿರುವ ರೈತಾಪಿ ವರ್ಗವನ್ನು ರಕ್ಷಿಸುವಂತದ್ದು ನಿಮ್ಮ ಕರ್ತವ್ಯ ನೀವು ಕೂಡಲೇ ಸಂಪೂರ್ಣವಾಗಿರುವ ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹ ಮಾಡುತ್ತೇನೆ ಎಂದರು.