ಕೊಹಿಮಾ: ಕಾರು (Car) ಹಾಗೂ ಲಾರಿ ನಡುವಿನ ಭೀಕರ ಅಪಘಾತದಿಂದಾಗಿ (Accident) ಎಂಟು ಮಂದಿ ಸಾವನ್ನಪ್ಪಿದ ಘಟನೆ ನಾಗಾಲ್ಯಾಂಡ್ನ (Nagaland) ತ್ಸೆಮಿನ್ಯುನಲ್ಲಿ ನಡೆದಿದೆ. ಮೃತರಲ್ಲಿ ಮೂವರು ಮಹಿಳೆಯರು ಇತ್ತೀಚೆಗೆ ನಾಗಾಲ್ಯಾಂಡ್ ಸ್ಟಾಫ್ ಸೆಲೆಕ್ಷನ್ ಬೋರ್ಡ್ (ಎನ್ಎಸ್ಎಸ್ಬಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇವರು ಸರ್ಕಾರಿ ಸೇವೆಗೆ ಸೇರಲು ನೇಮಕಾತಿ ಪತ್ರಗಳನ್ನು ಸಹ ಪಡೆದಿದ್ದರು ಎಂದು ತಿಳಿದು ಬಂದಿದೆ.
ಅಪಘಾತದ ಪರಿಣಾಮ ಟ್ರಕ್ ಹಾಗೂ ಕಾರು ಎರಡೂ ಪ್ರಪಾತಕ್ಕೆ ಉರುಳಿವೆ. ಇದರಿಂದಾಗಿ ಕಾರಿನಲ್ಲಿದ್ದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ಮೃತಪಟ್ಟಿದ್ದಾನೆ. ಮೃತರಲ್ಲಿ ಚಾಲಕ ಸೇರಿದಂತೆ ಆರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಕೊಹಿಮಾದಿಂದ ಮೊಕೊಕ್ಚುಂಗ್ ಕಡೆಗೆ ತೆರಳುತ್ತಿತ್ತು. ಈ ವೇಳೆ ಮರಳು ತುಂಬಿದ ಲಾರಿ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಈ ಅಪಘಾತ ಸಂಭವಿಸಿದೆ. ರಾಜ್ಯದ ರಾಜಧಾನಿ ಕೊಹಿಮಾದಿಂದ ಸುಮಾರು 65 ಕಿಮೀ ದೂರದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಟ್ರಕ್ ಚಾಲಕ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.