ಮುಂಬೈ: ಹೋಳಿ ಹಬ್ಬದ ದಿನದಂದು ಕೋಳಿ ಸಾರು (Chicken Sambar) ಮಾಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿ, ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ (Maharashtra) ಚಂದ್ರಾಪುರದಲ್ಲಿ Chandrapura) ನಡೆದಿದೆ. ಪತ್ನಿ ಕೋಳಿ ಸಾರು ಮಾಡಲು ನಿರಾಕರಿಸಿದ್ದಕ್ಕೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆಕೆಯ ತಲೆಗೆ ಬಲವಾಗಿ ಹೊಡೆದಿದ್ದು, ಕೈ ಮೂಳೆ ಮೂಳೆ ಮುರಿಯುವಷ್ಟರ ಮಟ್ಟಿಗೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಆರೋಪಿ ಪತಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಏನಿದು ಕೋಳಿ ಸಾರಿನ ಕತೆ?
ಹೋಳಿ ಹಬ್ಬದ ದಿನದಂದು ಪತಿ ಮನೆಗೆ ಕೋಳಿ ತಂದು, ಹೆಂಡತಿಗೆ ರುಚಿ-ರುಚಿಯಾಗಿ ಸಾರು ಮಾಡುವಂತೆ ಹೇಳಿದ್ದಾನೆ. ಆದ್ರೆ ಪತ್ನಿ ಆಗಲೇ ಊಟ ರೆಡಿಯಾಗಿದೆ, ಈಗ ಕೋಳಿ ಬೇಯಿಸಲು ಸಾಧ್ಯವಿಲ್ಲ ಎಂದಿದ್ದಾಳೆ. ಇದರಿಂದ ಪತಿಯ ಕೋಪ ನೆತ್ತಿಗೇರಿ, ಮನೆಯ ಅಂಗಳದಲ್ಲೇ ಬಿದ್ದಿದ್ದ ದೊಣ್ಣೆ ತಂದು ಮನಬಂದಂತೆ ಥಳಿಸಿದ್ದಾನೆ.
ಪತ್ನಿಗೆ ತಲೆಗೆ ಹಲವು ಬಾರಿ ಹೊಡೆದು ತೀವ್ರ ರಕ್ತಸ್ರಾವವಾಗುವಂತೆ ಮಾಡಿದ್ದಾನೆ. ಇದರಿಂದ ತೀವ್ರ ಪೆಟ್ಟಾಗಿದ್ದು, ಆಕೆಯ ಕೈ ಮೂಳೆ ಸಹ ಮುರಿದಿದೆ. ಆಕೆಯ ಚೀರಾಟ ಕೇಳಿ ಮನೆಗೆ ದೌಡಾಯಿಸಿದ ನೆರೆಹೊರೆಯವರು ಜಗಳ ಬಿಡಿಸಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಗಾಯಗೊಂಡ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆರೋಪಿ ಪತಿಯನ್ನ ಬಂಧಿಸಿರುವ ಚಂದ್ರಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.