ರಿಯಾದ್: ಮುಸ್ಲಿಮರ ಪವಿತ್ರ ನಗರ ಮೆಕ್ಕಾಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಒಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಗೆ ಬೆಂಕಿ ಹೊತ್ತಿಕೊಂಡಿದ್ದು ಬಸ್ನಲ್ಲಿದ್ದ 20 ಜನರು ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಪ್ರಾಂತ್ಯದ ಅಸಿರ್ನಲ್ಲಿ ನಡೆದಿದೆ.
ಮೆಕ್ಕಾಗೆ ಬಸ್ ನಲ್ಲಿ ಹಲವರನ್ನು ಕರೆದುಕೊಂಡು ಹೋಗಲಾಗುತ್ತಿದೆ. ಬಸ್ ಗೆ ಬೆಂಕಿ ಹತ್ತಿಕೊಂಡ ಪರಿಣಾಮ ಬಸ್ ನಲ್ಲಿದ್ದ 20 ಜನರು ಸಜೀವ ದಹನವಾಗಿದ್ದು ಇನ್ನೂ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾತ್ರಾರ್ಥಿಗಳನ್ನು ಮೆಕ್ಕಾ ಹಾಗೂ ಮದೀನಾಗೆ ಕರೆದುಕೊಂಡು ಹೋಗುವ ಸಂದರ್ಭ ನಿರಂತರವಾಗಿ ಸವಾಲು ಎದುರಿಸಲಾಗುತ್ತಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿಕೊಟ್ಟಿದೆ.
ವರದಿಯ ಪ್ರಕಾರ ಬಸ್ ಮೊದಲು ಸೇತುವೆಯಲ್ಲಿ ಹೋಗುತ್ತಿದ್ದಾಗ ಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಈ ವೇಳೆ ಭಾರೀ ಬೆಂಕಿ ಸಂಭವಿಸಿದ್ದು, ಜನರ ಸಾವಿಗೆ ಕಾರಣವಾಗಿದೆ. 2019ರ ಅಕ್ಟೋಬರ್ನಲ್ಲೂ ಇಂತಹುದೇ ಇನ್ನೊಂದು ಭೀಕರ ಅಪಘಾತ ಸಂಭವಿಸಿತ್ತು. ಮದೀನಾ ಬಳಿ ದೊಡ್ಡ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು, ಸುಮಾರು 35 ವಿದೇಶಿಗರು ಮೃತಪಟ್ಟಿದ್ದರು.
